ಪ್ರಸಕ್ತ ಸಾಲಿನ 2011-12ರ ರಾಜ್ಯ ಬಜೆಟ್‌ನಲ್ಲಿ ಕೃಷಿ ಹಾಗೂ ನೀರಾವರಿಗೆ ಕಳೆದ ಬಜೆಟ್‌ಗಿಂತ ಶೇ.3-4ರಷ್ಟು ಹೆಚ್ಚುವರಿ ಹಣ ನೀಡಿದ್ದು ಬಿಟ್ಟರೆ, ಇರುವ ಯೋಜನೆಗಳನ್ನೇ ತಿರುವು ಮುರುವು ಮಾಡಿ ಹೇಳಿದ್ದು ಬಿಟ್ಟರೆ ಹೊಸದೇನೂ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 6ನೇ ಬಾರಿಗೆ ಮಂಡಿಸಿರುವ ಬಜೆಟ್‌ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಕೃಷಿ, ರೇಷ್ಮೆ, ಪಶುಸಂಗೋಪನೆ ಮತ್ತು ನೀರಾವರಿ ಇಲಾಖೆಯನ್ನು ಒಂದುಗೂಡಿಸಿ ಕೃಷಿ ಬಜೆಟ್ ಎಂದು ಕರೆದು ಜನರನ್ನು ಮೂರ್ಖರನ್ನಾಗಿಸಲು ಯತ್ನಿಸಿದ್ದಾರೆ ಎಂದು ದೂರಿದರು.
ಅಲ್ಲದೇ ಈ ಬಾರಿ ಬಜೆಟ್ ಸುಮಾರು 12ಸಾವಿರ ಕೋಟಿ ರೂ. ಕೊರತೆ ಬಜೆಟ್ ಆಗಿದೆ. ಬಜೆಟ್‌ನ ಒಟ್ಟು ಮೊತ್ತ 85,391 ಕೋಟಿ ರೂ. ಅದೇ ಕಳೆದ ಬಾರಿಯ ಬಜೆಟ್‌ನ ಒಟ್ಟು ಮೊತ್ತ 70,635 ಕೋಟಿ. ಈ ಬಾರಿಯ ಬಜೆಟ್‌ನಲ್ಲಿ ಕೊರತೆಯಿರುವ ಸುಮಾರು 12ಸಾವಿರ ಕೋಟಿಯನ್ನು ಕಳೆದರೆ ಹೆಚ್ಚು ಕಡಿಮೆ ಇದು ಕಳೆದ ಬಾರಿ ನೀಡಿದ ಬಜೆಟ್ ಆಗುತ್ತದೆ ಎಂದು ವಿಶ್ಲೇಷಿಸಿದರು.
ಭೂ ಚೇತನ ಕಾರ್ಯಕ್ರಮದಡಿ 30 ಲಕ್ಷ ಹೆಕ್ಟೇರ್ ಭೂಮಿಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು 40 ಕೋಟಿ ರೂ.ನೀಡಿದ್ದಾರೆ. ಆದರೆ ಈ ಪ್ರಮಾಣದ ಭೂಮಿಗೆ ಈ ಹಣ ಯಾವುದಕ್ಕೂ ಸಾಲದು. ಅಲ್ಲದೇ ಪ್ರವಾಹದಿಂದಾಗಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ಲಕ್ಷಾಂತರ ಎಕರೆ ಭೂಮಿ ಮರಳಿನಿಂದ ತುಂಬಿ ಹೋಗಿದೆ. ಆದರೆ ಅದರ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದರು.
ಪ್ರತಿವರ್ಷ ಕೊರತೆ ಬಜೆಟ್ ಅನ್ನೇ ನೀಡುತ್ತಿರುವ ಯಡಿಯೂರಪ್ಪ ದೇಶದ ಜಿಡಿಪಿ ಶೇ.9 ಇದೆ, ಆದರೆ ರಾಜ್ಯದ ಜಿಡಿಪಿಯನ್ನು ಶೇ.8.5ಕ್ಕೆ ಏರಿಸುವುದಾಗಿ ಹೇಳಿದ್ದಾರೆ. ಈ ಜಿಡಿಪಿಯನ್ನು ಸಾಧಿಸುವುದು ಕಷ್ಟ. ಯಾಕೆಂದರೆ ಬಜೆಟ್‌ನಲ್ಲಿ ಯಾವುದೇ ತೆರಿಗೆ ಬರುವಂತಹ ಕಾರ್ಯಕ್ರಮಗಳು ಇಲ್ಲ ಎಂದು ಹೇಳಿದರು.