ನಿತ್ಯ-ರಂಜಿತಾ 'ರಾಸಲೀಲೆ' ದೃಶ್ಯ ಪ್ರಸಾರಕ್ಕೆ ಹೈಕೋರ್ಟ್ ತಡೆ
ಬೆಂಗಳೂರು, ಮಂಗಳವಾರ, 1 ಮಾರ್ಚ್ 2011( 09:17 IST )
ಕಾಮಿಸ್ವಾಮಿ ನಿತ್ಯಾನಂದ ಹಾಗೂ ನಟಿ ರಂಜಿತಾ ಅವರು ರಾಸಲೀಲೆಯಲ್ಲಿ ತೊಡಗಿದ್ದಾರೆ ಎನ್ನಲಾಗಿರುವ ದೃಶ್ಯಾವಳಿಯನ್ನು ಬಿತ್ತರಿಸದಂತೆ ಹಾಗೂ ಈ ಕುರಿತ ಚಿತ್ರ ಪ್ರಕಟಿಸದಂತೆ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಿಗೆ ಹೈಕೋರ್ಟ್ ಸೋಮವಾರ ಆದೇಶಿಸಿ ನೋಟಿಸ್ ಜಾರಿ ಮಾಡಿದೆ.
ಈ ದೃಶ್ಯ ಪ್ರಸಾರ ಮಾಡದಂತೆ ಹೈಕೋರ್ಟ್ ಆದೇಶ ಹೊರಡಿಸಿದ ಮೇಲೂ ಅದನ್ನು ಪ್ರಸಾರ ಮಾಡುತ್ತಿರುವುದಾಗಿ ದೂರಿ ಮಾಧ್ಯಮಗಳ ವಿರುದ್ಧ ರಂಜಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನಡೆಸಿದರು.
2010ರ ಆಗಸ್ಟ್ ತಿಂಗಳಿನಲ್ಲಿ ಇದೇ ಕೋರಿಕೆ ಇಟ್ಟು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ರಾಸಲೀಲೆ ದೃಶ್ಯ ಬಿತ್ತರಿಸುತ್ತಿದ್ದ ಕೆಲವು ಟಿವಿ ಚಾನೆಲ್‌ಗಳನ್ನು ಮಾತ್ರ ಪ್ರತಿವಾದಿಯನ್ನಾಗಿಸಲಾಗಿತ್ತು. ಪ್ರತಿವಾದಿಗಳು ವಿವಾದಿತ ದೃಶ್ಯ ಬಿತ್ತರಿಸಬಾರದು ಎಂದು ಕೋರ್ಟ್ ಆಗ ಆದೇಶಿಸಿತ್ತು.
ಆದರೆ ಈಗ ಆ ಪ್ರತಿವಾದಿಗಳನ್ನು ಹೊರತುಪಡಿಸಿ ಉಳಿದ ಮಾಧ್ಯಮಗಳು ತಮ್ಮ ಘನತೆಗೆ ಕುಂದು ತರುವಂತಹ ದೃಶ್ಯ ಬಿತ್ತರಿಸುತ್ತಿವೆ ಎಂದು ರಂಜಿತಾ ದೂರಿದ್ದರು. ವಿವಾದಕ್ಕೆ ಸಂಬಂಧಿಸಿದಂತೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಸೇರಿದಂತೆ 40ಕ್ಕೂ ಅಧಿಕ ಪತ್ರಿಕೆ ಹಾಗೂ ಟಿವಿ ಚಾನೆಲ್‌ಗಳಿಗೆ ತುರ್ತು ನೋಟಿಸ್ ಜಾರಿಗೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಈ ವಿಚಾರಣೆ ವೇಳೆ ರಂಜಿತಾ ಕೋರ್ಟ್‌ಗೆ ಹಾಜರಾಗಿದ್ದರು.