ವಿವಿಧ ಬಾಬ್ತುಗಳಿಂದ 3,400 ಕೋಟಿ ರೂ.ತೆರಿಗೆ ಬಾಕಿ ಬರಬೇಕಿದ್ದು, ಬಾಕಿ ವಸೂಲಿ ಮಾಡಲು ಸರಕಾರ ಯಾವುದೇ ರೀತಿಯ ಪ್ರಯತ್ನ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆರೋಪಿಸಿದರು.
ಅಬಕಾರಿ ಇಲಾಖೆಗೆ 700 ಕೋಟಿ ರೂ. ತೆರಿಗೆ ಬಾಕಿ ಬರಬೇಕಾಗಿದೆ. ಆದರೆ ಅಧಿಕಾರಿಗಳು ವಸೂಲಾತಿಗೆ ಮುಂದಾಗಿಲ್ಲ ಎಂದರು. 2011-12ನೇ ಸಾಲಿನ ಬಜೆಟ್ ಮೇಲೆ ಚರ್ಚೆ ಮುಂದುವರಿಸಿದ ಅವರು, ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲದಂತಾಗಿದೆ. ತೆರಿಗೆ ಬಾಕಿದಾರರಿಗೆ ಹೆದರಿಕೆ ಇಲ್ಲದಂತಾಗಿದೆ ಎಂದರು.
ರಾಜ್ಯದ ಹಣಕಾಸಿನ ಸ್ಥಿತಿ ಬಗ್ಗೆ ಅಂಕಿ ಅಂಶಗಳ ಸಮೇತ ವಿವರಿಸಿದ ಅವರು, ನಮ್ಮ ಅಗತ್ಯ ಮತ್ತು ಶಕ್ತಿಗೆ ಮೀರಿ ಸರಕಾರ ಸಾಲ ಮಾಡುತ್ತಿದೆ ಎಂದು ಹೇಳಿದರು. ಸಂಪನ್ಮೂಲ ಕ್ರೋಢೀಕರಣಕ್ಕೆ ಸರಕಾರ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿಲ್ಲ ಎಂದು ಆಕ್ಷೇಪಿಸಿದರು.
ಸರಕಾರಕ್ಕೆ ಸೇರಿದ 11 ಲಕ್ಷ ಎಕರೆ ಜಮೀನು ಒತ್ತುವರಿಯಾಗಿದೆ ಎಂದು ಎ.ಟಿ.ರಾಮಸ್ವಾಮಿ ಮತ್ತಿತರ ವರದಿಗಳಿಂದ ತಿಳಿದು ಬಂದಿದೆ. ಈ ಪೈಕಿ ಕೇವಲ 22 ಸಾವಿರ ಎಕರೆ ಒತ್ತುವರಿ ಜಮೀನನ್ನು ತೆರವುಗೊಳಿಸಲಾಗಿದೆ. ಹೀಗಾದರೆ ತೆರಿಗೇತರ ಸಂಪನ್ಮೂಲ ಕ್ರೋಢೀಕರಣ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರ ರಾಜ್ಯದ ತೆರಿಗೆ ಪಾಲಿನ ಹಣ ಮತ್ತು ಅನುದಾನವನ್ನು ಹೆಚ್ಚಿಗೆ ಮಾಡುತ್ತಿದ್ದರೂ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.