ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಜೆಟ್ ಅಧಿವೇಶನಕ್ಕೆ ಬ್ರೇಕ್ ಹಾಕಲು ಸಿಎಂ ಯತ್ನ: ಸಿದ್ದು (State budget 2011 | Congress | BJP | JDS | Yeddyurappa | Siddaramaiah)
ಬಜೆಟ್ ಅಧಿವೇಶನಕ್ಕೆ ಬ್ರೇಕ್ ಹಾಕಲು ಸಿಎಂ ಯತ್ನ: ಸಿದ್ದು
ಬೆಂಗಳೂರು, ಗುರುವಾರ, 3 ಮಾರ್ಚ್ 2011( 11:43 IST )
ವಿಶ್ವಕನ್ನಡ ಸಮ್ಮೇಳನದ ನೆಪದಲ್ಲಿ ವಿಧಾನಮಂಡಲದ ಬಜೆಟ್ ಅಧಿವೇಶನವನ್ನು ಮಾರ್ಚ್ 10ಕ್ಕೆ ಮೊಟಕುಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುನ್ನಾರ ನಡೆಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.
ಬುಧವಾರ ತಮ್ಮ ಅಧಿಕೃತ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದನಕ್ಕೆ ಬನ್ನಿ ಚರ್ಚೆ ಮಾಡೋಣ ಎಂದು ಆಹ್ವಾನ ನೀಡುವ ಮುಖ್ಯಮಂತ್ರಿ ಈಗ ಸಮ್ಮೇಳನದ ನೆಪ ಹೇಳಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಬಜೆಟ್‌ಗೆ ಸದನದ ಒಪ್ಪಿಗೆ ಪಡೆದ ನಂತರ ಗಣಿ ಹಗರಣ, ಭೂ ಹಗರಣ ಮತ್ತಿತರ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಸದನದಲ್ಲಿ ಚರ್ಚಿಸಲು ನಾವು ಸಿದ್ದತೆ ಮಾಡಿಕೊಂಡಿದ್ದೇವೆ. ಯಡಿಯೂರಪ್ಪ ಅವರೇ ಹಿಂದೆ ಈ ಬಗ್ಗೆ ಪಂಥಾಹ್ವಾನ ನೀಡಿದ್ದರು. ಆದರೆ ಈಗ ವಿಶ್ವಕನ್ನಡ ಸಮ್ಮೇಳನದ ಹೆಸರಿನಲ್ಲಿ ಚರ್ಚೆಗೆ ಅವಕಾಶ ನೀಡದಿರುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂದರು.
ಮಾರ್ಚ್ 10ಕ್ಕೆ ಅಧಿವೇಶನ ಅಂತ್ಯಗೊಳಿಸುವ ಬಗ್ಗೆ ಹಿಂದೆ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಅದನ್ನು ವಿರೋಧಿಸಿದ್ದವು. ಈಗ ಮತ್ತೆ ಅದೇ ವಿಷಯದ ಬಗ್ಗೆ ಶಾಸಕರಿಂದ ಸಹಿ ಸಂಗ್ರಹಿಸುತ್ತಿದ್ದಾರೆ. ಇದು ಚರ್ಚೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಎಂದು ಅವರು ಆಪಾದಿಸಿದರು.