ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೆ ಆಪರೇಶನ್ ಕಮಲ; ಜೆಡಿಎಸ್‌ನ 3 ಶಾಸಕರು ಬಿಜೆಪಿಗೆ? (Operation kamala | JDS | Congress | BJP | Ishwarappa | Yeddyurappa)
ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೊಂದು ಸುತ್ತಿನ ಆಪರೇಶನ್ ಕಮಲಕ್ಕೆ ಕೈಹಾಕಲು ಮುಂದಾಗಿದ್ದು, ಜೆಡಿಎಸ್‌ನ ಮೂವರು ಶಾಸಕರು ಗುರುವಾರ ಬಿಜೆಪಿ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೋಹ ನಡುವೆಯೇ ಕೊಪ್ಪಳ ಕ್ಷೇತ್ರದ ಶಾಸಕ ಸಂಗಣ್ಣ ಕರಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.

ಈ ಬಾರಿ ಬಿಜೆಪಿ ಮತ್ತೆ ಜೆಡಿಎಸ್ ಶಾಸಕರಿಗೆ ಗಾಳ ಹಾಕಿದ್ದು, ಕೊಪ್ಪಳ ಕ್ಷೇತ್ರದ ಕರಡಿ ಸಂಗಣ್ಣ, ಗುಲ್ಬರ್ಗಾ ಅಳಂದ ಕ್ಷೇತ್ರದ ಸುಭಾಶ್ ಗುತ್ತೇದಾರ್ ಹಾಗೂ ಸಿಂಧನೂರಿನ ವೆಂಕಟರಾವ್ ನಾಡಗೌಡ ಇಂದು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಇಂದು ಮಧ್ಯಾಹ್ನ ಗೌಪ್ಯವಾಗಿ ಸ್ಪೀಕರ್ ಕೆಜಿ ಬೋಪಯ್ಯ ಅವರನ್ನು ಭೇಟಿಯಾಗಿ ಸಂಗಣ್ಣ ಕರಡಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈ ಮಾಹಿತಿಯನ್ನು ಸ್ಪೀಕರ್ ಕಚೇರಿ ಮೂಲಗಳು ಕೂಡ ಖಚಿತಪಡಿಸಿವೆ.

ಜೆಡಿಎಸ್‌ನ ಮೂವರು ಶಾಸಕರ ಜತೆ ನಡೆಸಿದ ಮಾತುಕತೆ ಯಶಸ್ವಿಯಾಗಿರುವುದಾಗಿಯೂ ಬಿಜೆಪಿಯ ಮೂಲವೊಂದು ಖಚಿತಪಡಿಸಿತ್ತು. ಅಷ್ಟೇ ಅಲ್ಲ ಜೆಡಿಎಸ್‌ನ ಈ ಮೂವರು ಶಾಸಕರೇ ತಾವು ಜೆಡಿಎಸ್ ತೊರೆಯುವುದಾಗಿ ಇತ್ತೀಚೆಗಷ್ಟೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಲ್ಲದೇ ಬಿಜೆಪಿ ಮುಖಂಡರು ತಮ್ಮ ಜತೆ ಮಾತುಕತೆ ನಡೆಸಿರುವುದು ನಿಜ ಎಂದು ಕೂಡ ಅವರು ತಿಳಿಸಿದ್ದರು.

ಏತನ್ಮಧ್ಯೆ ಗುಲ್ಬರ್ಗಾ ಅಳಂದ ಕ್ಷೇತ್ರದ ಸುಭಾಶ್ ಗುತ್ತೇದಾರ್ ಹಾಗೂ ಸಿಂಧನೂರಿನ ವೆಂಕಟರಾವ್ ನಾಡಗೌಡ ಅವರು ಕೂಡ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ತಾವು ಜೆಡಿಎಸ್ ತೊರೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ ಅವರು ಕೂಡ ಕೆಲವೇ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಜ್ಯದ 19 ಕ್ಷೇತ್ರಗಳಿಗೆ ಚುನಾವಣೆ ನಡೆಸಬೇಕೆಂದು ಸ್ಪೀಕರ್ ಕೆಜಿ ಬೋಪಯ್ಯ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಬಿಜೆಪಿಯ 11 ಹಾಗೂ ಪಕ್ಷೇತರ ಐವರು ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದ ಇಬ್ಬರು ಹಾಗೂ ಜೆಡಿಎಸ್ ಪಕ್ಷದ 1 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಹಿನ್ನೆಲೆಯಲ್ಲಿ ಒಟ್ಟು 19 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಾಗಿದೆ. ಆ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ಚುನಾವಣಾ ತಾಲೀಮು ಆರಂಭಿಸಿದೆ. ಅದಕ್ಕೆ ಪೂರಕ ಎಂಬಂತೆ ಬಿಜೆಪಿ ಆಪರೇಶನ್ ಕಮಲಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾರು ಹೇಳಿದ್ದು, ಜೆಡಿಎಸ್ ತೊರೆಯಲ್ಲ: ನಾಡಗೌ
ಇವೆಲ್ಲಾ ಊಹಾಪೋಹ ಸುದ್ದಿಗಳು, ನಾನು ಜೆಡಿಎಸ್ ತೊರೆಯುವುದಿಲ್ಲ ಎಂದು ಸಿಂಧನೂರು ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡ ಸ್ಪಷ್ಟನೆ ನೀಡಿದ್ದಾರೆ. ಅನಾವಶ್ಯಕವಾಗಿ ಗೊಂದಲ ಹುಟ್ಟಿಸಲು ಈ ರೀತಿಯ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಹೀಗೆ ಮಾಧ್ಯಮಗಳು ಸತ್ಯಕ್ಕೆ ದೂರವಾದ ಸುದ್ದಿಯನ್ನು ಬಿತ್ತರಿಸುವುದರಿಂದ ನಮಗೂ ಏನೂ ಹೇಳಬೇಕೆಂದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಪರೇಶನ್ ಕಮಲನಾ ಹಾಗಂದ್ರೆ ಏನು-ಈಶ್ವರಪ್ಪ:
ಜೆಡಿಎಸ್‌ನ ಮೂರು ಶಾಸಕರನ್ನು ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಸೆಳೆದುಕೊಳ್ಳಲಾಗುತ್ತಿದೆ ಎಂಬ ವದಂತಿ ಇದೆಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರನ್ನು ಖಾಸಗಿ ಚಾನೆಲ್‌ವೊಂದು ಪ್ರಶ್ನಿಸಿದಾಗ, ಆಪರೇಶನ್ ಕಮಲನಾ ಹಾಗಂದ್ರೆ ಏನು? ನನಗೆ ಈ ವಿಷಯಾನೇ ಗೊತ್ತಿಲ್ಲ. ಯಾವ ಜೆಡಿಎಸ್ ಸದಸ್ಯರೂ ನನ್ನ ಸಂಪರ್ಕಿಸಿಲ್ಲ ಎಂದರು.

ನಾವು ಈಶ್ವರಪ್ಪ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದೇವೆ ಎಂದು ಜೆಡಿಎಸ್ ಶಾಸಕರು ನನ್ನ ಹೆಸರನ್ನು ಹೇಳಿದ್ದಾರಾ ಎಂದು ಪ್ರಶ್ನಿಸುವ ಮೂಲಕ ವರದಿಗಾರನ ಬಾಯ್ಮಿಚ್ಚಿಸಿದ ಘಟನೆಯೂ ನಡೆಯಿತು.
ಇವನ್ನೂ ಓದಿ