ರಾಜ್ಯದಲ್ಲಿ ಅಡಳಿತರೂಢವಾಗಿರುವ ಬಿಜೆಪಿ ಪಕ್ಷ ಶಾಸಕರ ಖರೀದಿ, ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ತೊಡಗಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ. ಇಂತಹ ಸರಕಾರವನ್ನು ಬೇರುಸಹಿತ ಕಿತ್ತೆಸೆಯಿರಿ ಎಂದು ಕಾಂಗ್ರೆಸ್ ಕರೆ ನೀಡಿದೆ.
ನಗರದ ನೆಹರು ಮೈದಾನದಲ್ಲಿ ಆಯೋಜಸಲಾದ ಕಾಂಗ್ರೆಸ್ ಪಕ್ಷದ 'ಬಿಜೆಪಿ ಹಟಾವೋ ಕರ್ನಾಟಕ ಬಚಾವೋ' ಅಂದೋಲನದ ನಾಡ ರಕ್ಷಣಾ ರಾಲಿಯಲ್ಲಿ ಸೇರಿದ ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾತನಾಡಿ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಬಿಜೆಪಿ ಕಮಲವನ್ನು ಬಾಡಿಸಿ ಕಾಂಗ್ರೆಸ್ ಕೈ ಬಲಪಡಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಸರಕಾರ ರೈತಪರ ಎಂದು ಹೇಳುತ್ತಿದೆ. ರೈತರಿಗೆ ಜನಸಾಮಾನ್ಯರಿಗೆ ಸರಕಾರ ಏನು ಮಾಡಿದೆ. ಕುರ್ಚಿ ಉಳಿಸಿಕೊಳ್ಳಲು ತಂತ್ರ ನಡೆಸಿ ಭ್ರಷ್ಟಾಚಾರವನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡಿಗೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಹಗರಣಗಳ ಮಾಹಿತಿ ನೀಡಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಮಾತನಾಡಿ, ಯಾವುದೇ ರಾಜ್ಯದಲ್ಲಿ ಈ ರೀತಿ ಶಾಸಕರನ್ನು ಹಣ, ಅಧಿಕಾರದ ಆಸೆ ತೋರಿಸಿ ಖರೀದಿಸಿರುವ ಉದಾಹರಣೆಗಳಿಲ್ಲ. ಅಂತಹ ಹೀನ ಇತಿಹಾಸ ಸೃಷ್ಟಿಸಿದ ಬಿಜೆಪಿ ರಾಜ್ಯವನ್ನಾಳಲು ನಾಲಾಯಕ್ ಎಂದು ಗುಡುಗಿದರು.