ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಕೃತಕಾಮಿ ಉಮೇಶ್ ರೆಡ್ಡಿ ಗಲ್ಲುಶಿಕ್ಷೆಗೆ ಸುಪ್ರೀಂ ತಡೆ (Umesh Reddy | Jack the Ripper | police | rape | murder | Supreme court)
ವಿಕೃತಕಾಮಿ ಉಮೇಶ್ ರೆಡ್ಡಿ ಗಲ್ಲುಶಿಕ್ಷೆಗೆ ಸುಪ್ರೀಂ ತಡೆ
ನವದೆಹಲಿ, ಗುರುವಾರ, 10 ಮಾರ್ಚ್ 2011( 12:03 IST )
ವಿಕೃತಕಾಮಿ ಹಾಗೂ ಸರಣಿ ಹಂತಕ ಉಮೇಶ್ ರೆಡ್ಡಿಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ವಿಕೃತಕಾಮಿ ಉಮೇಶ್ ರೆಡ್ಡಿಗೆ ವಿಭಾಗೀಯ ಪೀಠ ಆತನ ಕೃತ್ಯಕ್ಕೆ ಗಲ್ಲುಶಿಕ್ಷೆಯನ್ನು ವಿಧಿಸಿತ್ತು. ಆತನ ತಾಯಿ ಗೌರಮ್ಮ ಗಲ್ಲುಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಬುಧವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ನೀಡಿದೆ. ಗಲ್ಲುಶಿಕ್ಷೆ ವಿಧಿಸುವ ಅಧಿಕಾರ ವಿಭಾಗೀಯ ಪೀಠಕ್ಕಿಲ್ಲ. ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠಕ್ಕೆ ಮಾತ್ರ ಗಲ್ಲುಶಿಕ್ಷೆ ವಿಧಿಸುವ ಅಧಿಕಾರ ಹೊಂದಿರುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
1988ರಲ್ಲಿ ಉಮೇಶ್ ರೆಡ್ಡಿ ಜಯಶ್ರೀ ಎಂಬ ಮಹಿಳೆಯ ಕೈಯನ್ನು ಕಟ್ಟಿ ಅತ್ಯಾಚಾರ ಎಸಗಿದ್ದ. ಆ ಬಳಿಕ ಆಕೆಯನ್ನು ಕೊಂದು ಹಾಕಿ ಮನೆಯಲ್ಲಿದ್ದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ. ಇನ್ನೊಂದು ಮನೆಯಲ್ಲೂ ಇದೇ ರೀತಿ ಅಪರಾಧ ಎಸಗಲು ಯತ್ನಿಸಿದಾಗ ಆತನನ್ನು ಬಂಧಿಸಲಾಗಿತ್ತು. ಸುಮಾರು ಎಂಟು ವರ್ಷಗಳ ಸುದೀರ್ಘ ವಿಚಾರಣೆ ನಂತರ ಸೆಷನ್ಸ್ ಕೋರ್ಟ್ 2006ರ ಅಕ್ಟೋಬರ್ 26ರಂದು ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆ ವಿಧಿಸಿತ್ತು.
ಉಮೇಶ್ ರೆಡ್ಡಿ ಗಲ್ಲುಶಿಕ್ಷೆಯ ತೀರ್ಪನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ರೆಡ್ಡಿ ವಿರುದ್ಧ ಅತ್ಯಾಚಾರ, ಕೊಲೆ, ಚಿನ್ನಾಭರಣ ಕಳವು ಸೇರಿದಂತೆ 23ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.