'25 ವರ್ಷಗಳ ನಂತರ ನಡೆಯುತ್ತಿರುವ ವಿಶ್ವಕನ್ನಡ ಸಮ್ಮೇಳನದ ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಹ್ವಾನ ನೀಡಿದಾಗ ಅದನ್ನು ಸಂತಸದಿಂದ ಒಪ್ಪಿಕೊಂಡಿದ್ದೇನೆ. ಆದರೆ ಸಾಹಿತಿಗಳ ಆರೋಪದಿಂದ ನನಗೇನೂ ಬೇಸರವಾಗಿಲ್ಲ' ಎಂದು ಇನ್ಫೋಸಿಸ್ ಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ತಿಳಿಸಿದ್ದಾರೆ.
ವಿಶ್ವಕನ್ನಡ ಸಮ್ಮೇಳನ ಉದ್ಘಾಟನೆಯ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಬೆಳೆಯಬೇಕಾದರೆ, ಅದಕ್ಕೆ ಕನ್ನಡಿಗರು ಬೆಳೆಯಬೇಕು. ಅದೇ ರೀತಿ ಕರ್ನಾಟಕವೂ ಬೆಳೆಯಬೇಕು. ಆದರೂ ವಿಶ್ವಕನ್ನಡ ಸಮ್ಮೇಳನವನ್ನು ನಾನು ಉದ್ಘಾಟಿಸುವುದಕ್ಕೆ ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ನಾರಾಯಣ ಮೂರ್ತಿ ಏನು ಮಾಡಿದ್ದಾರೆ ಎಂಬುದಾಗಿಯೂ ಪ್ರಶ್ನಿಸಬಹುದು. ಹಾಗೆ ಪ್ರಶ್ನಿಸಲಿ ಅದರಲ್ಲಿ ತಪ್ಪೇನಿಲ್ಲ ಎಂದರು.
ನಾನೊಬ್ಬ ಕನ್ನಡಿಗನಾಗಿದ್ದೇನೆ. ಉತ್ತರ ಕರ್ನಾಟದಲ್ಲಿನ ನೆರೆ ಸಂತ್ರಸ್ತರಿಗಾಗಿ 30 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಹಾಗಾದರೆ ಬೇರೆ ಕಂಪನಿಗಳು ಎಷ್ಟು ಕೊಟ್ಟಿದ್ದಾರೆಂದು ವಿಚಾರಿಸಲಿ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ಯಾವುದೇ ಟೀಕೆ-ಟಿಪ್ಪಣಿಯಿಂದ ನನಗೇನೂ ಬೇಸರವಾಗಿಲ್ಲ. ನನಗೆ ಅದರಿಂದ ಕಡಿಮೆಯಾಗಲ್ಲ, ಹೆಚ್ಚೂ ಆಗಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಆಂಗ್ಲ ಮಾಧ್ಯಮ ಹಣವಂತರ ಸ್ವತ್ತಾಗಿದೆ. ಬಡ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ದೊರೆಯಲಿ ಎಂಬುದು ನನ್ನ ಆಶಯ. ಹಾಗಂತ ನಾನು ಕನ್ನಡ ವಿರೋಧಿ ಅಲ್ಲ ಎಂದು ಹೇಳಿದರು.
ಮಾರ್ಚ್ 11ರಿಂದ ಮೂರು ದಿನಗಳ ಕಾಲ ಗಡಿನಾಡಾದ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಯಲಿದೆ. ಸಮ್ಮೇಳನವನ್ನು ಇನ್ಫೋಸಿಸ್‌ನ ನಾರಾಯಣಮೂರ್ತಿ ಅವರು ಉದ್ಘಾಟಿಸಲಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಹೊರನಾಡ, ವಿದೇಶಿ ಗಣ್ಯರು ಆಗಮಿಸಲಿದ್ದಾರೆ. ಏತನ್ಮಧ್ಯೆ ವಿಶ್ವಕನ್ನಡ ಸಮ್ಮೇಳನವನ್ನು ನಾರಾಯಣಮೂರ್ತಿ ಉದ್ಘಾಟಿಸುತ್ತಿರುವುದಕ್ಕೆ ಬರಗೂರು, ಚಂಪಾ ಸೇರಿದಂತೆ ಹಲವು ಸಾಹಿತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಗುರುವಾರ ಬೆಂಗಳೂರಿನಲ್ಲಿ ಸ್ವಾಭಿಮಾನಿ ಕನ್ನಡಿಗರ ಸಮಾವೇಶವೂ ನಡೆಯಿತು. ಸಮಾವೇಶದಲ್ಲಿ ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ, ಚಂಪಾ, ಗೌರಿ ಲಂಕೇಶ್ ಸೇರಿದಂತೆ ಪ್ರಗತಿಪರ ಚಿಂತಕರು ಪಾಲ್ಗೊಂಡಿದ್ದರು.