'ಮತಾಂತರದ ಪರಿಣಾಮ ನಮ್ಮ ಜನಪ್ರತಿನಿಧಿಗಳಿಗೆ ತಿಳಿದಿದೆ. ಆದರೆ ಅವರಿಗೆ ಕಾನೂನಿನ ಜಾರಿಯ ಅಗತ್ಯತೆ ಬೇಕಾಗಿಲ್ಲ. ಯಾಕೆಂದರೆ ಅವರು ರಾಜಕಾರಣಿಗಳು. ಹಾಗಾಗಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಸುಲಭವಾಗಿ ಜಾರಿಯಾಗುತ್ತದೆ ಎಂದು ನಾನು ಭಾವಿಸುವುದಿಲ್ಲ' ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ವರ್ತಮಾನ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಮತಾಂತರ ನಿಷೇಧ ಸವಾಲು-ಪರಿಹಾರದ ದಾರಿ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತಾಂತರದ ಪಿಡುಗಿನ ಬಗ್ಗೆ ರಾಜಕಾರಣಿಗಳಿಗೆ ಗೊತ್ತು. ಅವರು ವೋಟು, ಅಧಿಕಾರ ಬೇಕು ಎಂದು ಕಿಡಿಕಾರಿದರು.
ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ನನಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಕೇಂದ್ರದಲ್ಲಿ ಆರು ವರ್ಷ ಬಿಜೆಪಿ ಸರಕಾರ ಇತ್ತು. ಆಗ ನಾನು ಒಂದೇ ಒಂದು ರೂಪಾಯಿಯ ಪ್ರಯೋಜನ ಪಡೆದಿಲ್ಲ. ಪ್ರಶಸ್ತಿ ಕೊಡಬೇಕೆಂದು ದುಂಬಾಲು ಬಿದ್ದಿಲ್ಲ. ಅದೇ ರೀತಿ ಮುಖ್ಯಮಂತ್ರಿ ಯಡಿಯೂರಪ್ಪನವರ ಹತ್ತಿರವೂ ಹೋಗಿಲ್ಲ, ಅವರ ಕಚೇರಿ ಎಲ್ಲಿದೆ ಎಂದೂ ಗೊತ್ತಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.
ಆದರೆ ನನಗೆ ಏನು ಹೇಳಬೇಕು ಅನಿಸುತ್ತದೆಯೋ ಅದನ್ನು ಹೇಳುವ ಹಕ್ಕು ನನಗಿದೆ. ಯಡಿಯೂರಪ್ಪರನ್ನೂ ಟೀಕಿಸುವೆ, ಬಿಜೆಪಿಯನ್ನೂ ಟೀಕಿಸುವೆ ಎಂದರು.
ಹಾಲಿ ಬಿಜೆಪಿ ಸರಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾದರೆ ಪ್ರತಿಪಕ್ಷದವರು ವಿರೋಧಿಸುತ್ತಾರೆ. ಆ ನಿಟ್ಟಿನಲ್ಲಿ ಇರುವ ಸಮಸ್ಯೆ ಜತೆಗೆ ಮತ್ತೊಂದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಲು ಸರಕಾರ ಎಷ್ಟರ ಮಟ್ಟಿಗೆ ಸಿದ್ದವಿದೆ? ಆದರೆ ನಾವು ಏನೂ ಮಾಡಬಾರದು ಎಂದು ಹೇಳುತ್ತಿಲ್ಲ. ನಮ್ಮ ಪ್ರಯತ್ನ, ಹೋರಾಟ ಮುಂದುವರಿಯಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.