ಎಪ್ರಿಲ್ 9ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಚನ್ನಪಟ್ಟಣದಿಂದ ಜಾತ್ಯಾತೀತ ಜನತಾದಳ ಪಕ್ಷದ (ಜೆಡಿಎಸ್) ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಸ್ಪರ್ಧಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಇವೆಲ್ಲವೂ ಮುಂದಿನೆರಡು ದಿನಗಳಲ್ಲಿ ಅಂತಿಮವಾಗಲಿದೆ.
ಜೆಡಿಎಸ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪಾಲ್ಗೊಂಡ ಮಾಜಿ ಸಿಎಂ ಕುಮಾರಸ್ವಾಮಿ, ಉಪಚುನಾವಣೆಯಲ್ಲಿ ತಮ್ಮ ಪಕ್ಷ ಏಕಾಂಗಿ ಸ್ಪರ್ಧೆ ನಡೆಸುವುದಾಗಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಜತೆ ಮೈತ್ರಿ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಕುಮಾರಸ್ವಾಮಿ, ಮೂರು ವಿಧಾನಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಅಲ್ಲದೆ ಬಿಜೆಪಿಯನ್ನು ಏಕಾಂಕಿಯಾಗಿ ಎದುರಿಸುವ ಶಕ್ತಿ ಜೆಡಿಎಸ್ ಹೊಂದಿದೆ ಎಂದು ಮಾಜಿ ಸಿಎಂ ನುಡಿದರು.
ಈ ನಡುವೆ ಜೆಡಿಎಸ್ ಭದ್ರಕೋಟೆ ಆಗಿರುವ ಚನ್ನಪಟ್ಟಣದಿಂದ ಸ್ವತಃ ಕುಮಾರಸ್ವಾಮಿ ಅವರೇ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ಆದರೆ ಎಲ್ಲರ ಹಿತದೃಷ್ಟಿಯಿಂದ ಮತದಾರರ ಅಪೇಕ್ಷೆಗಳಂತೆ ಪಕ್ಷದ ಅಂತಿಮ ನಿರ್ಧಾರ ಎರಡು ಮೂರು ದಿನಗಳಲ್ಲಿ ಘೋಷಣೆಯಾಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.