ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನ್ನ ಹೆಸರಿಗೆ ಮಸಿ ಬಳಿಯಲು ಯಾರಿಗೂ ಸಾಧ್ಯವಿಲ್ಲ: ಸಿಎಂ (BJP | Yeddyurappa | Vidhana parishath | Congress | JDS,)
'ತೇಜೋವಧೆ ಮಾಡುವ ಮೂಲಕ ನನ್ನ ಹೆಸರಿಗೆ ಮಸಿ ಬಳಿಯಲು ಎಂದೆಂದಿಗೂ ಸಾಧ್ಯವಿಲ್ಲ' ಎಂದು ಪ್ರತಿಪಕ್ಷಗಳ ವಿರುದ್ಧ ಗುಡುಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೊದಲು ಟ್ರಸ್ಟ್ ಮೇಲಿನ ಆರೋಪ ಸಾಬೀತುಪಡಿಸಿ ಎಂದು ವಿಪಕ್ಷಗಳಿಗೆ ಸವಾಲು ಹಾಕಿರುವ ಘಟನೆ ಮಂಗಳವಾರ ವಿಧಾನಪರಿಷತ್‌ನಲ್ಲಿ ನಡೆಯಿತು.

ಇಂದು ವಿಧಾನಪರಿಷತ್ ಕಲಾಪ ಆರಂಭವಾದಾಗ ಮುಖ್ಯಮಂತ್ರಿ ಪುತ್ರರಿಗೆ ಸೇರಿದ ಪ್ರೇರಣಾ ಶಿಕ್ಷಣ ಟ್ರಸ್ಟ್ ಡೊನೇಷನ್ ಪ್ರಕರಣ ಆಡಳಿತಾ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿತ್ತು.

ಈ ಸಂದರ್ಭದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಮೊದಲು ಆರೋಪ ಸಾಬೀತುಪಡಿಸಿ. ಅನಾವಶ್ಯಕ ಆರೋಪ ಮಾಡಿ ಗೊಂದಲ ಹುಟ್ಟುಹಾಕಬೇಡಿ. ನನ್ನ ವಿರುದ್ಧ ಆರೋಪ ಮಾಡಿ ಏನಾದರು ಸಾಧನೆ ಮಾಡಬಹುದು ಎಂಬ ಭ್ರಮೆ ನಿಮ್ಮಲ್ಲಿದ್ದರೆ (ಕಾಂಗ್ರೆಸ್,ಜೆಡಿಎಸ್) ಅದು ನಿಮ್ಮ ಜೀವನಮಾನದಲ್ಲೇ ಸಾಧ್ಯವಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಖಾರವಾಗಿ ವಾಗ್ದಾಳಿ ನಡೆಸಿದರು.

ಆದರೂ ವಿಧಾನಪರಿಷತ್‌ ವಿಪಕ್ಷ ನಾಯಕಿ ಮೋಟಮ್ಮ, ಜೆಡಿಎಸ್ ಮುಖಂಡ ವೈಎಸ್‌ವಿ ದತ್ತ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದರು.

ವಿಧಾನಸಭೆಯಲ್ಲೂ ಕೋಲಾಹಲ,ಜಟಾಪಟಿ:
ವಿಧಾನಸಭೆಯಲ್ಲಿ ಇಂದು ಕೂಡ ಪ್ರೇರಣಾ ಶಿಕ್ಷಣ ಟ್ರಸ್ಟ್ ಡೊನೇಷನ್ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಟ್ರಸ್ಟ್ ಕುರಿತಂತೆ ಮುಖ್ಯಮಂತ್ರಿಗಳು ನಿನ್ನೆ ನೀಡಿದ ಉತ್ತರ ಸಮಾಧಾನ ತಂದಿಲ್ಲ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಈ ಬಗ್ಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಈ ಬಗ್ಗೆ ಚರ್ಚೆ ಮಾಡದಿದ್ದರೆ ಜನರಿಗೆ ಮೋಸ ಮಾಡಿದ ಹಾಗೆ ಆಗುತ್ತದೆ. ಸದನದಲ್ಲಿ ಚರ್ಚೆ ಆಗಬೇಕು. ಅದಕ್ಕೆ ತಕ್ಕ ಉತ್ತರ ಹಾಗೂ ತನಿಖೆ ನಡೆಯಬೇಕಾಗಿರುವುದು ಅಗತ್ಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಆಗ ಕಾನೂನು ಸಚಿವ ಸುರೇಶ್ ಕುಮಾರ್ ಮಧ್ಯಪ್ರವೇಶಿಸಿ, ಯಾವುದೇ ಕಾರಣಕ್ಕೂ ಸಿಬಿಐ ತನಿಖೆಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ. ಸಿಬಿಐ ಕಾರ್ಯ ವೈಖರಿಯನ್ನು ಈಗಾಗಲೇ ಕಂಡಿದ್ದೇವೆ. ಕಳ್ಳರನ್ನು ಬಿಡೋದು, ಅಮಾಯಕರನ್ನು ಬಂಧಿಸುವುದು ಎಂಬುದಾಗಿ ಕಿಡಿಕಾರಿದರು. ಈ ಮಾತಿನಿಂದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಪ್ರತಿವಾಗ್ದಾಳಿ ನಡೆಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.

ಈ ಹಂತದಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಶಾಸಕರು ತಮ್ಮ, ತಮ್ಮ ಸ್ಥಾನಗಳಿಗೆ ತೆರಳಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂಬ ಮನವಿಯನ್ನೂ ಲೆಕ್ಕಿಸದೆ ಕೋಲಾಹಲವೆಬ್ಬಿಸಿದಾಗ ಕಲಾಪವನ್ನು ಅರ್ಧ ಗಂಟೆ ಮುಂದೂಡಿದರು. ನಂತರ ಕಲಾಪ ಆರಂಭವಾದಾಗಲೂ ಕೂಡ ಪ್ರತಿಪಕ್ಷಗಳು ಧರಣಿಯನ್ನು ಮುಂದುವರಿಸಿದ್ದರಿಂದ ಅಸಮಾಧಾನಗೊಂಡ ಸ್ಪೀಕರ್ ಕಲಾಪವನ್ನು 3 ಗಂಟೆಗೆ ಮುಂದೂಡಿದರು.
ಇವನ್ನೂ ಓದಿ