ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಉಲ್ಟಾ: ಪ್ರೇರಣಾ ಟ್ರಸ್ಟ್ ಬಗ್ಗೆ ಯಾವ ತನಿಖೆಯೂ ಇಲ್ಲ! (BJP | Yeddyurappa | Prerana trust | Vidhana sowdha | siddaramaiah | JDS)
WD
'ಪ್ರೇರಣಾ ಶಿಕ್ಷಣ ಟ್ರಸ್ಟ್ ಡೊನೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಲು ಸಿದ್ದ ಎಂದಿದ್ದ' ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ದಿಢೀರ್ ಉಲ್ಟಾ ಹೊಡೆದಿದ್ದು, ಪ್ರೇರಣಾ ಟ್ರಸ್ಟ್ ಬಗ್ಗೆ ಯಾವುದೇ ತನಿಖೆ ನಡೆಸುವುದಿಲ್ಲ ಎಂಬ ಹೇಳಿಕೆ ನೀಡಿರುವುದು ವಿಧಾನಮಂಡಲ ಕಲಾಪದಲ್ಲಿ ಮತ್ತೆ ಕೋಲಾಹಲ ನಡೆಯಲು ಕಾರಣವಾಯಿತು.

ಕಳೆದ ಮೂರು ದಿನಗಳಿಂದ ವಿಧಾನಮಂಡಲದ ಉಭಯ ಸದನಗಳಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರರಿಗೆ ಸೇರಿದ ಪ್ರೇರಣಾ ಶಿಕ್ಷಣಾ ಟ್ರಸ್ಟ್‌ಗೆ ಅಕ್ರಮವಾಗಿ ಹಣ ಸಂದಾಯವಾದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆಗ್ರಹಿಸಿದ್ದರು.

ಆದರೆ ಮಂಗಳವಾರ ನಡೆದ ಕಲಾಪದಲ್ಲಿ ತಾನು ಎಲ್ಲ ರೀತಿಯ ಚರ್ಚೆಗೂ ಸಿದ್ದ. ಅದೇ ರೀತಿ ಯಾರೆಲ್ಲ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ ಅವರೆಲ್ಲರದ್ದೂ ಸೇರಿ ಪ್ರೇರಣಾ ಶಿಕ್ಷಣ ಟ್ರಸ್ಟ್ ಬಗ್ಗೆಯೂ ತನಿಖೆ ನಡೆಯಲಿ. ಆದರೆ ಸಿಬಿಐ ತನಿಖೆಗೆ ಯಾವುದೇ ಕಾರಣಕ್ಕೂ ಸಿದ್ದನಿಲ್ಲ. ಬೇರೆ ಯಾವ ಸಂಸ್ಥೆಯಿಂದಾದರೂ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಸ್ಪೀಕರ್ ಹಾಗೂ ಸದನಕ್ಕೆ ಬಿಡುತ್ತೇನೆ ಎಂದು ಹೇಳಿದ್ದರು.

ಬುಧವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಧಾನಮಂಡಲದ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರೇರಣಾ ಟ್ರಸ್ಟ್‌‌ಗೆ ಅಕ್ರಮವಾಗಿ ಸಂದಾಯವಾಗಿರುವ ಹಣದ ಬಗ್ಗೆ ಸಿಬಿಐ ತನಿಖೆ ನಡೆಸಲೇಬೇಕು ಎಂದು ಪಟ್ಟು ಹಿಡಿದರು. ಅದಕ್ಕೆ ಜೆಡಿಎಸ್ ಮುಖಂಡರು ಕೂಡ ಸಾಥ್ ನೀಡಿದರು.

ಏತನ್ಮಧ್ಯೆ ಮಧ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ನೀವು ನನ್ನ ಮೇಲೆ ಗೂಬೆ ಕೂರಿಸಿ ಜನರಲ್ಲಿ ನನ್ನ ವಿರುದ್ಧ ತಪ್ಪು ಭಾವನೆ ಮೂಡುವಂತೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿದ್ದರೆ ಅದು ನಿಮ್ಮಿಂದ ಸಾಧ್ಯವಿಲ್ಲ. ಅಷ್ಟೇ ಅಲ್ಲ ಪ್ರೇರಣಾ ಟ್ರಸ್ಟ್ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಲ್ಲ. ಹಾಗಾಗಿ ಮುಂದಿನ ಕಲಾಪಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡರು.

ಪ್ರತಿಪಕ್ಷಗಳ ಒತ್ತಡಕ್ಕೆ ಕ್ಯಾರೆ ಎನ್ನದ ಮುಖ್ಯಮಂತ್ರಿಗಳ ಧೋರಣೆ ಖಂಡಿಸಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇದು ಮುಖ್ಯಮಂತ್ರಿಗಳ ಮೊಂಡುತನ ಮತ್ತು ಭಂಡತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಲಾಪ ಕೋಲಾಹಲದ ಗೂಡಾದ ಪರಿಣಾಮ ಸ್ಪೀಕರ್ ಕೆ.ಜಿ.ಬೋಪಯ್ಯ ಸದನವನ್ನು ಕೆಲಕಾಲ ಮುಂದೂಡಿದರು.

ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ:
ವಿಧಾನಸಭೆಯಲ್ಲಿ ಪ್ರೇರಣಾ ಟ್ರಸ್ಟ್ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಪ್ರತಿಪಕ್ಷಗಳ ಹಠಕ್ಕೆ ಆಡಳಿತಾರೂಢ ಬಿಜೆಪಿ ಒಪ್ಪದ ಪರಿಣಾಮ ವಿಧಾನಮಂಡಲದ ಕಲಾಪ ಗದ್ದಲ, ಕೋಲಾಹಲದಲ್ಲಿಯೇ ಅಂತ್ಯಕಂಡಿದೆ. ಗದ್ದಲದ ನಡುವೆ 12 ವಿಧೇಯಕಕ್ಕೆ ಅಂಕಿತ ಹಾಕಲಾಯಿತು.

ಕೋಲಾಹಲದ ನಡುವೆಯೇ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ವಿಧಾನಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದರು. ಆ ನಿಟ್ಟಿನಲ್ಲಿ ಈ ಬಾರಿಯ ವಿಧಾನಮಂಡಲದ ಕಲಾಪದಲ್ಲಿಯೂ ಮುಖ್ಯವಾದ ವಿಷಯಗಳ ಚರ್ಚೆ ನಡೆಯದೆ, ಕೇವಲ ಗದ್ದಲದಲ್ಲಿಯೇ ಮುಕ್ತಾಯಗೊಂಡಂತಾಗಿದೆ.
ಇವನ್ನೂ ಓದಿ