ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾಣಯ್ಯ ಪ್ರೇರಣೆ, ಗಣಿ ಉದ್ಯಮಕ್ಕೆ ಗುಡ್ ಬೈ: ರೆಡ್ಡಿ ಘೋಷಣೆ (Janardhan Reddy | stop mining business | Yeddyurappa | Legislative Council)
ನಾಣಯ್ಯ ಪ್ರೇರಣೆ, ಗಣಿ ಉದ್ಯಮಕ್ಕೆ ಗುಡ್ ಬೈ: ರೆಡ್ಡಿ ಘೋಷಣೆ
ಬೆಂಗಳೂರು, ಬುಧವಾರ, 16 ಮಾರ್ಚ್ 2011( 15:25 IST )
WD
ಕೇಂದ್ರ ಸರಕಾರ ಹಾಗೂ ರಾಜ್ಯದ ಪ್ರತಿಪಕ್ಷ ಮುಖಂಡರ ಕೆಂಗಣ್ಣಿಗೆ ಗುರಿಯಾಗಿ ಹೈರಾಣಾಗಿರುವ ಗಣಿಧಣಿ, ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ತಾನು ಇನ್ಮುಂದೆ ಕರ್ನಾಟಕದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ವ್ಯವಹಾರ ನಡೆಸಲ್ಲ ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ ತಾನು ಸಕ್ರಿಯವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಪರಿಷತ್ ಕಲಾಪದಲ್ಲಿ ನಿಯಮ 68ರ ಅಡಿ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲಿನ ಚರ್ಚೆಯಲ್ಲಿ ಕೆ.ಸಿ.ಕೊಂಡಯ್ಯ ಮಾತನಾಡುವಾಗ ಮಧ್ಯ ಪ್ರವೇಶಿಸಿದ ರೆಡ್ಡಿ, ನಾನು ಏನೇ ಮಾಡಲು ಹೊರಟರು ವಿವಾದವಾಗುತ್ತದೆ. ಪ್ರತಿಪಕ್ಷದವರು ಟೀಕಿಸುತ್ತಾರೆ. ಹೀಗಾಗಿ ಗಣಿ ಉದ್ಯಮಕ್ಕೆ ಗುಡ್ ಬೈ ಹೇಳಲು ತೀರ್ಮಾನಿಸಿದ್ದೇನೆ ಎಂದು ಘೋಷಿಸಿದರು. ಆದರೆ ತಾನು ಆಂಧ್ರಪ್ರದೇಶದಲ್ಲಿ ಗಣಿ ಉದ್ಯಮ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.
ಪ್ರತಿಪಕ್ಷಗಳ ಆರೋಪಕ್ಕೆ ಹೆದರಿ ಈ ನಿಲುವು ಕೈಗೊಂಡಿಲ್ಲ. ಟೀಕೆಯಿಂದ ನೊಂದಿದ್ದೇನೆ. ನಾಣಯ್ಯ ಅಂತವರಿಂದ ಪ್ರೇರಣೆ ಪಡೆದು ಇನ್ನು ಮುಂದೆ ಮೇಲ್ಮನೆ ಸದಸ್ಯನಾಗಿ, ಸಚಿವನಾಗಿ ಸಮಾಜ ಸೇವೆಯನ್ನೇ ಮಾಡುತ್ತೇನೆ ಎಂದು ಹೇಳಿದರು.
ನಾನು ಬಳ್ಳಾರಿಯಲ್ಲಿ ದೊಡ್ಡ ಪ್ರಮಾಣದ ಕೈಗಾರಿಕೆ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೆ. ಉದ್ಯಮಕ್ಕೆ 35 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ವಿಜಯನಗರ ಸ್ಟೀಲ್ ಕಂಪನಿ ಮಾಡುವ ಚಿಂತನೆಯೂ ಇತ್ತ. ಆದರೆ ನಿರಂತರ ಆರೋಪ, ಟೀಕೆಗಳಿಂದ ಮನನೊಂದು. ಆ ಯೋಜನೆಯಿಂದ ಹಿಂದೆ ಸರಿದಿದ್ದೇನೆ ಎಂದರು.