ಚಾಮರಾಜನಗರ ಮತ್ತು ತಮಿಳುನಾಡು ಗಡಿಭಾಗ ಪಾಲಾರ್‌ನಲ್ಲಿ 1993ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾದ ನರಹಂತಕ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಸೇರಿದಂತೆ ಏಳು ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.
ಸೇತುವೆಯ ಬಳಿ ಬಾಂಬ್ ಇಟ್ಟು ಸ್ಫೋಟಗೊಳಿಸಿದ ಪ್ರಕರಣದಲ್ಲಿ ಆರು ಮಂದಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪ್ರಧಾನ ಆರೋಪಿ. ಘಟನೆಯಲ್ಲಿ 22 ಪೊಲೀಸರು ಸಾವನ್ನಪ್ಪಿದ್ದರು.
ಆದರೆ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಮುತ್ತುಲಕ್ಷ್ಮಿ ಸೇರಿದಂತೆ ಪಾಪತ್ತಿ, ಸವರಿಯಪ್ಪನ್, ವೀರಣ್ಣ, ಬೋಂಡ ಬಸವ, ಕೊಳತ್ತೂರು ಮಣಿ ಹಾಗೂ ಸುಬ್ರಮಣಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ.ಸಿ.ವಿದ್ಯಾಧರ್ ಅವರು ಬುಧವಾರ ಈ ತೀರ್ಪು ಪ್ರಕಟಿಸಿದರು.
1993ರ ಏಪ್ರಿಲ್ 9ರಂದು ನರಹಂತಕ ವೀರಪ್ಪನ್ ಮತ್ತು ಸಹಚರರು, ಮಹದೇಶ್ವರ ಬೆಟ್ಟ ಬಳಿಯ ಪಾಲಾರ್ ಸೋರೆಕಾಯಿ ಮಡು ಎಂಬಲ್ಲಿ ನೆಲಬಾಂಬ್ ಸ್ಫೋಟಿಸಿದ್ದರಿಂದ ತಮಿಳುನಾಡು ಎಸ್‌ಟಿಎಪ್, ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರ ಬಾತ್ಮೀದಾರರು ಸೇರಿದಂತೆ 22 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣ ಮಲೆಮಹದೇಶ್ವರ ಬೆಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರಿಗೆ ಸೆರೆಸಿಕ್ಕ ಆರೋಪಿಗಳಾದ ಸೈಮನ್, ಬಿಲವೇಂದ್ರ, ಜ್ಞಾನಪ್ರಕಾಶ್, ಮೀಸೆಕಾರ ಮಾದಯ್ಯ ಅವರಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. 2002ರಲ್ಲಿ ಈ ನ್ಯಾಯಾಲಯ ನಾಲ್ವರಿಗೂ ಮರಣದಂಡನೆ ಶಿಕ್ಷೆ ವಿಧಿಸಿತಿ.ಶಿಕ್ಷೆ ಇನ್ನೂ ಜಾರಿಯಾಗಿಲ್ಲ.
ಮತ್ತೆ ಬಂಧನ: ಬಾಂಬ್ ಸ್ಫೋಟ ಪ್ರಕರಣದಲ್ಲಿ ಮುತ್ತುಲಕ್ಷ್ಮಿ ಹಾಗೂ ಪಾಪತ್ತಿ ಖುಲಾಸೆಗೊಂಡಿದ್ದಾರೆ. ಇವರಿಬ್ಬರು ಮಹದೇಶ್ವರ ಬೆಟ್ಟದ ರಂಗಸ್ವಾಮಿ ಒಡ್ಡು ಎಂಬಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪವಿದ್ದು, ಮತ್ತೆ ನ್ಯಾಯಾಂಗ ಬಂಧನದಲ್ಲಿ ಇರಬೇಕಾಗಿದೆ.