ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನಗ್ಯಾಕೆ ಶಿಕ್ಷೆ: ಸಚಿವರ ಮುಂದೆ ಕಣ್ಣೀರು ಹಾಕಿದ ಸಿಎಂ? (BJP | Ishwarappa | Yeddyurappa | Ananth kumar | Congress | Karnataka)
WD
ವಿರೋಧ ಪಕ್ಷಗಳು ನನ್ನನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ. ನನಗೆ ಕೊಟ್ಟ ಕಷ್ಟವನ್ನು ಈ ಹಿಂದೆ ಯಾವುದೇ ಮುಖ್ಯಮಂತ್ರಿಗಳಿಗೆ ಕೊಟ್ಟಿಲ್ಲ ಎಂದು ಅಲವತ್ತುಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ತಡರಾತ್ರಿ ಸಚಿವರನ್ನು ಮನೆಗೆ ಕರೆಸಿಕೊಂಡು ಕಣ್ಣೀರು ಹಾಕಿದ್ದಾರೆನ್ನಲಾಗಿದೆ!

ಲಭ್ಯ ಮಾಹಿತಿ ಪ್ರಕಾರ ವಿರೋಧ ಪಕ್ಷಗಳು ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಸದಸ್ಯರ ಪಾತ್ರದ ಬಗ್ಗೆ ಸದನದಲ್ಲಿ ಹಿಗ್ಗಾಮುಗ್ಗಾ ಜನ್ಮ ಜಾಲಾಡುತ್ತಿರುವುದರಿಂದ ರೋಸಿ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹುತೇಕ ಎಲ್ಲ ಸಚಿವರನ್ನು ಕರೆಯಿಸಿಕೊಂಡು ಸದನದಲ್ಲಿ ನಡೆದ ಘಟನಾವಳಿಗಳ ಬಗ್ಗೆ ಸಚಿವರ ಮುಂದೆ ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗಿದೆ.

ನಮ್ಮವರ ಕುಮ್ಮಕ್ಕಿನಿಂದಲೇ ಈ ರೀತಿಯ ನೋವು ಅನುಭವಿಸುವಂತಾಗಿದೆ. ನಾನು ಏನು ತಪ್ಪು ಮಾಡಿದ್ದೇನೆ?ಏಕೆ ಈ ರೀತಿ ಮಾಡಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. 25 ವರ್ಷಗಳ ಕಾಲ ಪಕ್ಷವನ್ನು ಕಟ್ಟಿದ್ದೇನೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ನನ್ನದೇ ಆದ ಕೊಡುಗೆ ಕೊಟ್ಟಿದ್ದೇನೆ. ಆದರೂ ನಮ್ಮವರೇ ವಿರೋಧ ಪಕ್ಷದವರ ಕೈಗೆ ದಾಖಲೆಗಳನ್ನು ಕೊಟ್ಟು ನನ್ನ ಖಳನಾಯಕನನ್ನಾಗಿ ಮಾಡಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಉಪ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಮುಖ್ಯಮಂತ್ರಿಗಳ ಭ್ರಷ್ಟಾಚಾರ ಹೊರ ಹಾಕುತ್ತಿರುವುದರಿಂದ ಆತಂಕಗೊಂಡಿರುವ ಯಡಿಯೂರಪಪ ಸಚಿವ ಸಂಪುಟದ ಸದಸ್ಯರ ಬೆಂಬಲ ಗಳಿಸಿಕೊಂಡು ಮುಂದಿನ ಹೋರಾಟಕ್ಕೆ ಸಜ್ಜಾಗಲು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಆರೋಗ್ಯ ಸಚಿವ ಶ್ರೀರಾಮುಲು ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ರೆಸಾರ್ಟ್‌ವೊಂದರಲ್ಲಿ ಭೇಟಿ ಮಾಡಿದ ಒಂದೆರಡು ದಿನಗಳಲ್ಲೇ ಕುಮಾರಸ್ವಾಮಿ ದೆಹಲಿಯಲ್ಲಿ ಸುದ್ದಿಗೋಷ್ಠಿ ಕರೆದು ಮುಖ್ಯಮಂತ್ರಿ ಪುತ್ರರು ನಡೆಸುತ್ತಿರುವ ಪ್ರೇರಣಾ ಟ್ರಸ್ಟ್ ದೇಣಿಗೆ ಸಂಗ್ರಹ ವಿಚಾರ ಹಾಗೂ ಮುಖ್ಯಮಂತ್ರಿಯಿಂದ ಆಗುತ್ತಿರುವ ಅಧಿಕಾರ ದುರುಪಯೋಗದ ಕರ್ಮಕಾಂಡವನ್ನು ಬಯಲಿಗೆಳೆದಿರುವ ಅಂಶವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಏನೇ ಆದರೂ ತಾನು ಇದಕ್ಕೆಲ್ಲ ಜಗ್ಗದಲ್ಲ. ನೀವು ನನಗೆ ಬೆಂಬಲ ಕೊಡಿ, ನಾನು ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪನ ಶಕ್ತಿ ತೋರಿಸುತ್ತೇನೆ ಎಂದು ಆವೇಶದಿಂದ ಹೇಳಿದ್ದಾರೆನ್ನಲಾಗಿದೆ.

ಈಶ್ವರಪ್ಪ ನೇತೃತ್ವದಲ್ಲಿ ರಹಸ್ಯ ಸಭೆ:
ಸರಕಾರದ ವಿರುದ್ಧ ಪ್ರತಿಪಕ್ಷಗಳ ಆರೋಪ, ಭ್ರಷ್ಟಾಚಾರದ ಕಳಂಕದಿಂದ ಹೊರಬರಬೇಕು ಎಂಬ ಉದ್ದೇಶದಿಂದ ಬಿಜೆಪಿಯ ಒಂದು ಗುಂಪು ಮಂಗಳವಾರ ರಾತ್ರಿ ದಿಢೀರ್ ಆಗಿ ರಹಸ್ಯ ಸಭೆ ನಡೆಸಿದೆ.

ಪಕ್ಷದ ನಿಗದಿತ ಹೊಸ ಕಚೇರಿಯಲ್ಲಿ ರಾತ್ರಿ 10ರಿಂದ 12ಗಂಟೆವರೆಗೆ ಸಭೆ ನಡೆದಿದ್ದು, ಈಶ್ವರಪ್ಪ, ಅನಂತಕುಮಾರ್, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಕರುಣಾಕರ ರೆಡ್ಡಿ, ರಾಮದಾಸ್, ವಿಶ್ವೇಶ್ವರ ಹೆಗಡೆ ಕಾಗೇರಿ, ಚರಂತಿಮಠ, ಕಳಕಪ್ಪ ಬಂಡಿ, ಅರವಿಂದ ಲಿಂಬಾವಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಭ್ರಷ್ಟಾಚಾರದ ವಿಷಯ ಮುಂದಿಟ್ಟುಕೊಂಡು ಯಡಿಯೂರಪ್ಪ ಅವರನ್ನು ಸಿಎಂ ಗದ್ದುಗೆಯಿಂದ ಕೆಳಗಿಳಿಸುವುದು ಇದರ ಹಿಂದಿನ ಉದ್ದೇಶ ಎನ್ನಲಾಗಿದೆ. ಅಲ್ಲದೇ ಯಾವುದೇ ಶಾಸಕರು, ಸಚಿವರು ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರಿಗೆ ದೂರು ನೀಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಮತ್ತೆ ಭಿನ್ನರ ಸಭೆ, ಸಿಎಂ ದಿಢೀರ್ ಹಾಜರ್:
ತನಗ್ಯಾಕೆ ಈ ಶಿಕ್ಷೆ ಎಂದೆಲ್ಲ ಆಪ್ತ ಸಚಿವರು, ಶಾಸಕರ ಮುಂದೆ ಕಣ್ಣೀರು ಹಾಕಿದ ಬೆನ್ನಲ್ಲೇ ಬುಧವಾರ ತಡರಾತ್ರಿ ಈಶ್ವರಪ್ಪ, ಅನಂತಕುಮಾರ್ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಮತ್ತೆ ಸಭೆ ನಡೆಯುತ್ತಿದ್ದಾಗ ಈ ವಿಷಯ ತಿಳಿದ ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್ ಭೇಟಿ ನೀಡಿದ ಪರಿಣಾಮ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ಸಚಿವರು ದಂಗಾಗದ ಘಟನೆ ನಡೆದಿತ್ತು.

ಈ ಸಂದರ್ಭದಲ್ಲಿ ಕೆಲವರು ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದರು. ಅಂತೂ ಸಿಎಂ ವಿರುದ್ಧದ ಸಭೆ ಅರ್ಧಕ್ಕೆ ನಿಂತು ಹೋಗಿದೆ. ಆದರೂ ಸಭೆಗೆ ಆಗಮಿಸಿದ ಮುಖ್ಯಮಂತ್ರಿಗಳು ಯಾವ ಸಿಟ್ಟನ್ನೂ ತೋರಿಸದೆ, ಉಪ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ದುಡಿದು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇವನ್ನೂ ಓದಿ