'ಕಾಂಗ್ರೆಸ್ ಪಕ್ಷಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಾಗಾಗಿ ಈ ರಾಜ್ಯವನ್ನು ಲೂಟಿ ಮಾಡಿರುವ ಅಪ್ಪ-ಮಕ್ಕಳ ಜತೆ ಕೈಜೋಡಿಸಬೇಡಿ'...ಹೀಗೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಪರಿಷತ್ ಕಲಾಪದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಂತೆಯೇ ಮತ್ತೊಂದೆಡೆ ಸಚಿವ ರೇಣುಕಾಚಾರ್ಯ, ಜೆಡಿಎಸ್ ಶಾಸಕ ಸಂದೇಶ್ ನಾಗರಾಜ್ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಗುರುವಾರ ನಡೆಯಿತು.
ಪ್ರೇರಣಾ ಟ್ರಸ್ಟ್‌ಗೆ ಅಕ್ರಮವಾಗಿ ಡೊನೇಷನ್ ಸಂದಾಯವಾದ ಬಗ್ಗೆ ಇಂದೂ ಕೂಡ ಪ್ರತಿಪಕ್ಷಗಳು ಧ್ವನಿ ಎತ್ತಿ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿಗಳು, ಗೌಡರ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಸಾಥ್ ನೀಡಬಾರದು.
ಕೇಂದ್ರದ ಅನುದಾನವನ್ನು ರಾಜ್ಯ ಸರಕಾರ ಸಮರ್ಪಕವಾಗಿ ಬಳಸುತ್ತಿಲ್ಲ ಎಂದು ಸಂಸತ್‌ನಲ್ಲಿ ರಾಜ್ಯದ ಮಾನ ಹರಾಜು ಹಾಕಲು ಹೊರಟಿರುವ ಗೌಡರಿಗೆ ಮಾನ-ಮರ್ಯಾದೆ ಇದೆಯಾ? ಅಪ್ಪ-ಮಕ್ಕಳಿಗೆ ನಾಚಿಕೆ ಆಗ್ಬೇಕು ಎಂದ ಅವರು ರಾಜ್ಯವನ್ನು ಲೂಟಿ ಮಾಡಿದ ಅಪ್ಪ-ಮಕ್ಕಳಿಗೆ ಕಾಂಗ್ರೆಸ್‌ನವರು ಬೆಂಬಲ ಕೊಡಬೇಡಿ ಎಂದು ಆವೇಶದಿಂದ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸದನದ ಬಾವಿಯ ಸಮೀಪದಲ್ಲೇ ಇದ್ದ ಜೆಡಿಎಸ್ ಶಾಸಕ ಸಂದೇಶ್ ನಾಗರಾಜ್ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ನಡುವೆ ವಾಗ್ಯುದ್ಧ ನಡೆಯಿತು. ಈ ಸಂದರ್ಭದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ಕಲಾಪದಲ್ಲಿ ಕೋಲಾಹಲದಿಂದಾಗಿ ಯಾರು ಯಾರಿಗೆ ಏನು ಹೇಳುತ್ತಿದ್ದಾರೆಂಬುದೇ ತಿಳಿಯದಾಯಿತು.
ಆಗ ರೇಣುಕಾಚಾರ್ಯ ಅವರನ್ನು ಸಚಿವ ಲಕ್ಷ್ಮಣ ಸವದಿ, ಬಚ್ಚೇಗೌಡ, ಕೃಷ್ಣ ಪಾಲೇಮಾರ್ ಸಮಾಧಾನಪಡಿಸಿದರೆ, ಸಂದೇಶ್ ನಾಗರಾಜ್ ಅವರನ್ನು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸಮಾಧಾನಪಡಿಸಿದರು. ಆಗ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ನಂತರ ಆರಂಭಗೊಂಡ ಕಲಾಪದಲ್ಲಿಯೂ ಪ್ರತಿಪಕ್ಷಗಳು ಪ್ರೇರಣಾ ಟ್ರಸ್ಟ್ ವಿಚಾರದಲ್ಲೇ ಗದ್ದಲ ಆರಂಭಿಸಿದಾಗ, ತರಾತುರಿಯಲ್ಲೇ 11 ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಯಿತು. ಕೋಲಾಹಲದ ನಡುವೆಯೇ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮೇಲ್ಮನೆ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ ಎಂದು ಪ್ರಕಟಿಸುವ ಮೂಲಕ ಉಭಯ ಸದನಗಳು ಗದ್ದಲದಲ್ಲಿಯೇ ಕೊನೆಗೊಂಡಂತಾಗಿದೆ.