ಆಡಳಿತಾರೂಢ ಬಿಜೆಪಿಯೊಳಗೆ ಮತ್ತೆ ಅಸಮಾಧಾನ ಸ್ಫೋಟಗೊಂಡಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಕ್ಕೆ ಪ್ರಯತ್ನಿಸಿದ ಸಚಿವರು ಪತ್ರಕರ್ತರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಗದೆ ಪತ್ರಿಕೋಷ್ಠಿಯಿಂದ ಪಲಾಯನ ಮಾಡಿದ ಘಟನೆ ಗುರುವಾರ ನಡೆಯಿತು.
ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ, ರಹಸ್ಯ ಸಭೆ ನಡೆದಿಲ್ಲ ಎಂದು ಸಮರ್ಥನೆ ನೀಡಲು ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದರು. ಸಿಎಂ ಆಪ್ತ ಸಚಿವರಾದ ವಿ.ಎಸ್.ಆಚಾರ್ಯ, ಸುರೇಶ್ ಕುಮಾರ್, ಮುರುಗೇಶ್ ನಿರಾಣಿ, ವಿ.ಸೋಮಣ್ಣ ಪಾಲ್ಗೊಂಡಿದ್ದರು.
ಬಿಜೆಪಿಯಲ್ಲಿ ಭಿನ್ನಮತ ಎದ್ದಿದೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದು ಆಚಾರ್ಯ ಮಾತಿಗಾರಂಭಿಸಿದ್ದರು. ಬಿಜೆಪಿ ಕಚೇರಿಯಲ್ಲಿ ರಾತ್ರಿ ನಡೆದ ಸಭೆಗೆ ನಾನೂ ಹೋಗಿದ್ದೆ. ಅಲ್ಲಿ ಸಿಎಂ ವಿರುದ್ಧ ಏನೇನೂ ನಡೆಯಲಿಲ್ಲ ಎಂದು ಸಮಜಾಯಿಷಿ ನೀಡಿದರು.
ದೇವೇಗೌಡ ಮತ್ತು ಕುಮಾರಸ್ವಾಮಿ ಅನಾವಶ್ಯಕವಾಗಿ ಆರೋಪ ಮಾಡುತ್ತಿದ್ದಾರೆ. ಆದರೆ ಈಗ ನೋಡಿ ಕರ್ನಾಟಕ ಕಂಡು ಕೇಳರಿಯದ ಗೌಡರ ಕುಟುಂಬದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಘೋಷಿಸಿ ಕುತೂಹಲ ಹುಟ್ಟು ಹಾಕಿದರು.
ಆಗ ಟಿವಿ ಚಾನೆಲ್‌ಗಳು ಕೂಡಲೇ ಸಚಿವರತ್ತ ಮುಖಮಾಡಿದಾಗ, ದಾಖಲೆಗಳ ಬಗ್ಗೆ ಸಚಿವ ಸುರೇಶ್ ಕುಮಾರ್ ಮಾತನಾಡುತ್ತಾರೆ ಎನ್ನುತ್ತಾ ಚಾನೆಲ್‌ಗಳ ಮೈಕ್‌ಗಳನ್ನು ಅವರ ಕಡೆಗೆ ತಳ್ಳಿದರು. ಇದರಿಂದ ಗಾಬರಿಗೊಂಡ ಸುರೇಶ್ ಕುಮಾರ್ ನಾನು ಹೇಳುವುದು ಏನೂ ಇಲ್ಲ. ನೀವೇ ಹೇಳಿ ಬಿಡಿ ಎಂದು ಜಾರಿಕೊಂಡರು!
ತದನಂತರ ಸೋಮಣ್ಣ ಅವರ ಹೆಗಲಿಗೆ ಜವಾಬ್ದಾರಿ ವಹಿಸಲು ಆಚಾರ್ಯ ಮುಂದಾದಾಗ, ಅವರೂ ಕೂಡ ನಾನು ಹೇಳುವುದೇನೂ ಇಲ್ಲವಲ್ಲ ಎಂದು ನುಣುಚಿಕೊಂಡರು. ಹೀಗೆ ಒಬ್ಬೊಬ್ಬರೇ ಜಾರಿಕೊಳ್ಳುತ್ತಿದ್ದಾಗ ಮಧ್ಯ ಪ್ರವೇಶಿಸಿದ ಪತ್ರಕರ್ತರು, ಯಾರೋ ನಿಮ್ಮನ್ನು ಇಲ್ಲಿಗೆ ಬಲವಂತವಾಗಿ ಕಳುಹಿಸಿದಂತಿದೆಯಲ್ಲವೇ ಎಂದು ಪ್ರಶ್ನಿಸಿದಾಗ ಸಚಿವರು ಇಲ್ಲವಲ್ಲ ಎಂದರು.
ಆಗ ಬಿಜೆಪಿ ಕಚೇರಿಯಲ್ಲಿ ನಡೆದ ರಹಸ್ಯ ಸಭೆ, ಸಿಎಂ ದಿಢೀರ್ ಭೇಟಿ, ಕಾರು ಚಾಲಕನಿಗೆ ಸಿಎಂ ಗುದ್ದಿದ್ದರ ಕುರಿತು ಪ್ರಶ್ನೆಗಳ ಸುರಿಮಳೆಯಾಗುತ್ತಿದ್ದಂತೆಯೇ ಸಚಿವರು ಪತ್ರಿಕಾಗೋಷ್ಠಿಯನ್ನು ದಿಢೀರ್ ಮೊಟಕುಗೊಳಿಸಿ ಪಲಾಯನ ಮಾಡಿದ್ದರು.