ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೆ ಭಿನ್ನಮತ; ಸಿಎಂ ಆಹ್ವಾನ ಕೊಟ್ರು 50 ಶಾಸಕರು ಗೈರು (BJP | Yeddyurappa | Congress | JDS | Ishwarappa | Shobha Karandlaje)
ಮತ್ತೆ ಭಿನ್ನಮತ; ಸಿಎಂ ಆಹ್ವಾನ ಕೊಟ್ರು 50 ಶಾಸಕರು ಗೈರು
ಬೆಂಗಳೂರು, ಶುಕ್ರವಾರ, 18 ಮಾರ್ಚ್ 2011( 16:08 IST )
ಪಕ್ಷದೊಳಗೆ ಬೂದಿಮುಚ್ಚಿದ ಕೆಂಡದಂತಿದ್ದ ಅಸಮಾಧಾನವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ತಮ್ಮ ನಿವಾಸದಲ್ಲಿ ಶಾಸಕರು, ಸಚಿವರಿಗಾಗಿ ಏರ್ಪಡಿಸಿದ್ದ ಚಹಾಕೂಟಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ 50 ಮಂದಿ ಶಾಸಕರು ಗೈರುಹಾಜರಾಗುವ ಮೂಲಕ ಸಿಎಂ ನಾಯಕತ್ವಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಇಂದು ರೇಸ್‌ಕೋರ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶಾಸಕರು, ಸಚಿವರನ್ನು ಚಹಾಕೂಟಕ್ಕೆ ಆಹ್ವಾನಿಸಿದ್ದರು. ಚಹಾಕೂಟಕ್ಕೆ ಕೆ.ಎಸ್.ಈಶ್ವರಪ್ಪ, ಶೋಭಾ ಕರಂದ್ಲಾಜೆ ಹಾಗೂ ರೆಡ್ಡಿ ಸಹೋದರರು ಸೇರಿದಂತೆ 55 ಮಂದಿ ಸಿಎಂ ಆಹ್ವಾನಕ್ಕೆ ಕ್ಯಾರೆ ಎನ್ನದೆ ತಮ್ಮ ವಿರೋಧವನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಏತನ್ಮಧ್ಯೆ ಯಡಿಯೂರಪ್ಪ ಅವರ ನಡವಳಿಕೆಯಿಂದ ರೋಸಿಹೋಗಿರುವ ಅತೃಪ್ತರು ರಾಜ್ಯಾಧ್ಯಕ್ಷರ ಮೂಲಕ ಪಕ್ಷದ ಹೈಕಮಾಂಡ್‌ಗೂ ದೂರು ನೀಡಿದ್ದಾರೆ.
ಆ ನಿಟ್ಟಿನಲ್ಲಿ ಮುನಿಸಿಕೊಂಡಿರುವ ಶಾಸಕರ ಮನವೊಲಿಸುವ ಜವಾಬ್ದಾರಿಯನ್ನು ಸಚಿವರಾದ ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಹಾಗೂ ಬಸವರಾಜ್ ಬೊಮ್ಮಾಯಿಗೆ ವಹಿಸಲಾಗಿದೆ.
ಹಲವು ಅಗ್ನಿಪರೀಕ್ಷೆಗಳನ್ನು ಎದುರಿಸಿ ಗೆದ್ದು ಬಂದಿರುವ ಯಡಿಯೂರಪ್ಪ ಇದೀಗ ಮತ್ತೆ ಪಕ್ಷದ ಸಚಿವರು,ಶಾಸಕರ ಭಿನ್ನಮತ ಮತ್ತೊಂದು ಕಂಟಕವಾಗಿ ಪರಿಣಮಿಸಿದೆ. ಈ ಸಮಸ್ಯೆಯನ್ನೂ ಶತಾಯ-ಗತಾಯ ಶಮನಗೊಳಿಸುವ ವಿಶ್ವಾಸವನ್ನು ಯಡಿಯೂರಪ್ಪ ಹೊಂದಿದ್ದಾರೆ. ಏತನ್ಮಧ್ಯೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿಎಂ ಅವರನ್ನು ಗದ್ದುಗೆಯಿಂದ ಕೆಳಗಿಳಿಸಿ, ಹೊಸ ನಾಯಕತ್ವದಲ್ಲಿ ಆಡಳಿತ ನಡೆಸುವ ಇಂಗಿತ ಭಿನ್ನರದ್ದಾಗಿದೆ ಎಂದು ಮೂಲವೊಂದು ತಿಳಿಸಿದೆ.
ಆದರೆ ಸಿಎಂ ನಿರೀಕ್ಷೆ ಹುಸಿಯಾಗಿದ್ದು, ಬಹುತೇಕ ಶಾಸಕರು, ಸಚಿವರು ಗೈರುಹಾಜರಾಗಿದ್ದರು. ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವುದೇ ಅಸಮಾಧಾನ, ಭಿನ್ನಮತ ಇಲ್ಲ ಎಂದು ಸ್ಪಷ್ಟಪಡಿಸಿದರು. ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚೆ ನಡೆಸುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದರು.
ಚಹಾಕೂಟಕ್ಕೆ ಎಲ್ಲಾ ಶಾಸಕರು, ಸಚಿವರಿಗೆ ಆಹ್ವಾನ ನೀಡಲಾಗಿದ್ದರೂ ಕೂಡ ಕೇವಲ 40 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಇಲ್ಲ...ಇದು ನಾನು ಕರೆದದ್ದಲ್ಲ. ಸಚಿವರು, ಶಾಸಕರೇ ನನ್ನ ಭೇಟಿ ಮಾಡಲು ಬಂದಿರುವುದಾಗಿ ಮುಖ್ಯಮಂತ್ರಿ ಹಾರಿಕೆಯ ಉತ್ತರ ನೀಡಿ ನುಣುಚಿಕೊಂಡರು.