ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲವೇ ಇಲ್ಲ. ಈಶ್ವರಪ್ಪ ಮತ್ತು ನನ್ನ ನಡುವಿನ ಬಾಂಧವ್ಯ ಉತ್ತಮವಾಗಿದೆ. ಅದೇ ರೀತಿ ಎಲ್ಲ ಶಾಸಕರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ವರದಿಯಾದಂತೆ ಪಕ್ಷದಲ್ಲಿ ಯಾವುದೇ ಭಿನ್ನಮತ ಉದ್ಭವಿಸಿಲ್ಲ. ಮೂರು ಕ್ಷೇತ್ರಗಳ ಉಪಚುನಾವಣೆ ಸಂಬಂಧ ಚುನಾವಣಾ ತಂತ್ರ ರೂಪಿಸಲು ಈಶ್ವರಪ್ಪ ಸಭೆ ಕರೆದಿದ್ದರು. ಮಾಧ್ಯಮಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಸಮಜಾಯಿಷಿ ನೀಡಿದರು. ಆದರೆ ಪ್ರತಿಪಕ್ಷಗಳ ಯಾವುದೇ ಕುತಂತ್ರ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಸಾಧನೆ ಸಹಿಸದೆ ಕಾಂಗ್ರೆಸ್ ಮತ್ತು ಜೆಡಿಎಸ್ ಹುಳಿ ಹಿಂಡುವ ಕೆಲಸ ಮಾಡುತ್ತಿವೆ. ವಿಧಾನಮಂಡಲದಲ್ಲಿ ನಮ್ಮ ಪಕ್ಷವನ್ನು ಎದುರಿಸಲು ಸಾಧ್ಯವಿಲ್ಲದ ವಿಪಕ್ಷಗಳು ಅನಗತ್ಯ ವಿಚಾರದ ಬಗ್ಗೆ ಪ್ರಸ್ತಾಪಿಸಿ ಪಲಾಯನ ಮಾಡಿದವು ಎಂದು ಆರೋಪಿಸಿದರು.
ಅಲ್ಲದೇ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್ ಪಕ್ಷವನ್ನು ಬುಡಸಮೇತ ಕಿತ್ತು ಹಾಕುವವರೆಗೆ ಸುಮ್ಮನಿರುವುದಿಲ್ಲ ಎಂದು ಗುಡುಗಿದರು. ದೇವೇಗೌಡರದು ಲಜ್ಜೆಗೇಡಿತನದ ವರ್ತನೆ. ತಮ್ಮ ಸ್ಥಾನಕ್ಕೆ ಅನುಗುಣವಾಗಿ ವರ್ತಿಸದ ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಜನಪ್ರಿಯತೆ ಕುಗ್ಗಿಸಲು ಜೆಡಿಎಸ್ ವಾಮಮಾರ್ಗ ಅನುಸರಿಸುತ್ತಿದೆ. ಈ ಬಗ್ಗೆ ಜನತೆ ಅರ್ಥಮಾಡಿಕೊಳ್ಳಬೇಕು. ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಅಪ್ಪ-ಮಕ್ಕಳ ಜತೆ ಕೈಜೋಡಿಸಿದರೆ ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದರು. ಕಡೆ ಪಕ್ಷ ಪ್ರತಿಪಕ್ಷದ ಸ್ಥಾನ ಸಿಗುವಂತೆಯಾದರೂ ವರ್ತಿಸಿ ಇಲ್ಲದಿದ್ದರೆ ಅದನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.