ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುಮಾರ ತೆರಿಗೆ ವಂಚನೆ, 4 ಹೆಸರಲ್ಲಿ ಶೇರು: ಪುಟ್ಟಸ್ವಾಮಿ
(Kumaraswamy | HDK | Puttaswamy | Yeddyurappa | JDS | Karnataka | Land Scam)
ಕುಮಾರ ತೆರಿಗೆ ವಂಚನೆ, 4 ಹೆಸರಲ್ಲಿ ಶೇರು: ಪುಟ್ಟಸ್ವಾಮಿ
ಬೆಂಗಳೂರು, ಶನಿವಾರ, 19 ಮಾರ್ಚ್ 2011( 17:39 IST )
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಒಂದಿಲ್ಲೊಂದು ಹಗರಣಗಳ ಆರೋಪವನ್ನು ಮಾಡುತ್ತಲೇ ಇರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿಯೂ ಒಂದೊಂದಾಗಿ ಹಗರಣ ಬಯಲು ಮಾಡಲು ತೊಡಗಿದೆ.
ಎಚ್‌ಡಿಕೆ ನಾಲ್ಕು ಹೆಸರುಗಳಲ್ಲಿ ಶೇರು ವಹಿವಾಟು ನಡೆಸುತ್ತಾ, ಸರಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ, ಮಾಜಿ ಮುಖ್ಯಮಂತ್ರಿಯು ಕೆ.ಕುಮಾರಸ್ವಾಮಿ, ಎಚ್.ಕುಮಾರಸ್ವಾಮಿ, ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ಕುಮಾರಸ್ವಾಮಿ... ಹೀಗೆ ನಾಲ್ಕು ಹೆಸರುಗಳಲ್ಲಿ ಶೇರು ವಹಿವಾಟು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ 275 ಎಕರೆಯಷ್ಟು ಜಮೀನನ್ನು ಡೀನೋಟಿಫೈ ಮಾಡಿದ್ದಾರೆ. ಅತ್ತಿಗೆ ಕವಿತಾ ಹೆಸರಲ್ಲಿ 50 ಲಕ್ಷ ರೂಪಾಯಿಗೆ ನಾಲ್ಕು ಎಕರೆ ಭೂಮಿ ಖರೀದಿಸಿ, ಅದನ್ನು 4 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದ ಅವರು, ಒಂದೇ ದಿನದಲ್ಲಿ 60 ಎಕರೆ ಜಮೀನು ಡೀನೋಟಿಫೈ ಮಾಡಿರುವುದು ಅವರ ಸಾಧನೆ ಎಂದರು.
ಕುಮಾರಸ್ವಾಮಿ ಕುಟುಂಬದ ಈ ಅಕ್ರಮಗಳಿಂದಾಗಿ ರಾಜ್ಯ ಸರಕಾರದ ಬೊಕ್ಕಸಕ್ಕೆ 2 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಮುಖ್ಯಮಂತ್ರಿಯಾಗಿದ್ದಾಗ ಸ್ವಜನಪಕ್ಷಪಾತ ತೋರಿದ್ದ ಆರೋಪಕ್ಕಾಗಲೀ, ತಮ್ಮ ಅತ್ತಿಗೆ ವಿಮಲಾ ಅವರಿಗೆ ಸೈಟು ಕೊಡಿಸಿರುವ ಬಗೆಗಿನ ಆರೋಪಕ್ಕಾಗಲೀ ಇದುವರೆಗೂ ಕುಮಾರಸ್ವಾಮಿ ಯಾವುದೇ ಉತ್ತರ ನೀಡಿಲ್ಲ ಎಂದು ಪುಟ್ಟಸ್ವಾಮಿ ಕಿಡಿ ಕಾರಿದರು.
ಈ ಕುರಿತು ಇನ್ನಷ್ಟು ದಾಖಲೆಗಳನ್ನು ಮಂಗಳವಾರ ಬಹಿರಂಗಪಡಿಸುವುದಾಗಿಯೂ ಪುಟ್ಟಸ್ವಾಮಿ ಹೇಳಿದರು.