ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಮೇಲೆ ಕುಮಾರಸ್ವಾಮಿ ಮತ್ತೊಂದು ಹಗರಣಾಸ್ತ್ರ
(Karnataka | JD-S | Kumaraswamy | Yeddyurappa | Allegations | Land Scam)
ಯಡಿಯೂರಪ್ಪ ಮೇಲೆ ಕುಮಾರಸ್ವಾಮಿ ಮತ್ತೊಂದು ಹಗರಣಾಸ್ತ್ರ
ಬೆಂಗಳೂರು, ಶನಿವಾರ, 19 ಮಾರ್ಚ್ 2011( 18:14 IST )
WD
ಯಡಿಯೂರಪ್ಪ ವಿರುದ್ಧ ಹಗರಣಗಳ ಸರಮಾಲೆಯನ್ನೇ ತೊಡಿಸುತ್ತಿರುವ ಜೆಡಿಎಸ್, ಬತ್ತಳಿಕೆಯಿಂದ ಮತ್ತೊಂದು ಬಾಣ ಹೊರಬಿದ್ದಿದ್ದು, ಮುಖ್ಯಮಂತ್ರಿಯವರು ಯೋಜನೆಯ ಗುತ್ತಿಗೆಯನ್ನು ಕೊಡಿಸಿ, ತಮ್ಮ ಕುಟುಂಬದ ಒಡೆತನದ ಎರಡು ಕಂಪನಿಗಳಿಗೆ 13 ಕೋಟಿ ರೂ. 'ಕಿಕ್ ಬ್ಯಾಕ್' ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಆರೋಪಿಸಿದ್ದಾರೆ.
1032 ಕೋಟಿ ರೂಪಾಯಿಗಳ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಗುತ್ತಿಗೆ ಕೊಡಿಸಿದ್ದಕ್ಕೆ ಪ್ರತಿಯಾಗಿ, ಯಡಿಯೂರಪ್ಪ ಕುಟುಂಬದವರಿಂದ ನಡೆಸಲ್ಪಡುತ್ತಿರುವ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಮತ್ತು ಸಹ್ಯಾದ್ರಿ ಹೆಲ್ತ್‌ಕೇರ್ ಎಂಡ್ ಡಯಾಗ್ನಸ್ಟಿಕ್ಸ್ ಸಂಸ್ಥೆಗಳು ಮುರುಡೇಶ್ವರ ಪವರ್ ಕಾರ್ಪೊರೇಶನ್‌ನಿಂದ ಶೇರುಗಳ ರೂಪದಲ್ಲಿ ಲಾಭ ಪಡೆದಿವೆ ಎಂಬುದು ಕುಮಾರ ಆರೋಪ.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಕಾಗದ ಪತ್ರಗಳನ್ನು ತೋರಿಸುತ್ತಾ ಮಾತನಾಡಿದ ಅವರು, ಧವಳಗಿರಿ ಪ್ರಾಪರ್ಟೀಸ್ 11 ಕೋಟಿ ಹಾಗೂ ಸಹ್ಯಾದ್ರಿ ಹೆಲ್ತ್‌ಕೇರ್ 2 ಕೋಟಿ ಹಣ ಪಡೆದಿದೆ ಎಂದು ಆರೋಪಿಸಿದರು. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದಾಗಲೇ ಸರಕಾರದ ಗುತ್ತಿಗೆ ಕೊಡಿಸುವ ಪ್ರಕ್ರಿಯೆ ಆರಂಭವಾಗಿತ್ತು. ಅವರು ಮುಖ್ಯಮಂತ್ರಿಯಾದ ಬಳಿಕ ಇದು ಪೂರ್ಣಗೊಂಡಿತು. ಗುತ್ತಿಗೆಯನ್ನು ಮುರುಡೇಶ್ವರ ಪವರ್ ಕಾರ್ಪೊರೇಶನ್ ಮತ್ತು ಜ್ಯೋತಿ ಲಿ. ಸಂಸ್ಥೆಯಿಂದ ಜಂಟಿಯಾಗಿ ನಡೆಸಲ್ಪಡುತ್ತಿದ್ದ ಆರ್ಎನ್ಎಸ್ ಇನ್ಫ್ರಾಸ್ಟ್ರಕ್ಚರ್ ಲಿ. ಸಂಸ್ಥೆಗೆ 2008-09ರಲ್ಲಿ ನೀಡಲಾಗಿಯಿತು ಎಂದಿದ್ದಾರೆ ಕುಮಾರ.
ಜ್ಯೋತಿ ಕಂಪನಿಯು ಹಿಮಾಚಲ ಪ್ರದೇಶದಲ್ಲಿ ಕಪ್ಪು ಪಟ್ಟಿಯಲ್ಲಿದೆ. ಕರ್ನಾಟಕ ನೀರಾವರಿ ನಿಗಮದಿಂದ ಆಕ್ಷೇಪಣೆ ಇದ್ದ ಹೊರತಾಗಿಯೂ ಗುತ್ತಿಗೆ ನೀಡಲಾಗಿದೆ. 2003-04ರಲ್ಲಿ 550 ಕೋಟಿ ರೂ. ಮೂಲ ಯೋಜನೆ ಹೊಂದಿದ್ದ ಈ ಯೋಜನೆಯ ಗುತ್ತಿಗೆ ಮೊತ್ತವನ್ನು 1032 ಕೋಟಿಗೆ ಏರಿಸಲಾಯಿತು. ಮೊನ್ನೆ ಆರೋಪಿಸಲಾದ ಪ್ರೇರಣಾ ಶಿಕ್ಷಣ ಸಂಸ್ಥೆಯ ದೇಣಿಗೆ ವಿಚಾರವೂ ಸೇರಿದಂತೆ ಎಲ್ಲ ಹಗರಣಗಳನ್ನು ಸಿಬಿಐ ಸೇರಿದಂತೆ ಯಾವುದೇ ತನಿಖಾ ಏಜೆನ್ಸಿಗೆ ಒಪ್ಪಿಸಲು ರಾಜ್ಯ ಸರಕಾರಕ್ಕೆ ಸೂಚನೆ ನೀಡಬೇಕೆಂದು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ಈ ನೀರಾವರಿ ಯೋಜನೆಗೆ 2009ರಲ್ಲಿ 33 ಕೋಟಿ ಹಾಗೂ 2010ರಲ್ಲಿ 70 ಕೋಟಿ ಹೀಗೆ ಒಟ್ಟು 103 ಕೋಟಿ ರೂ. ಮುಂಗಡ ಹಣವು ಸರಕಾರದಿಂದ ಬಿಡುಗಡೆಯಾಗಿದೆ. ಮೂಲ ಯೋಜನಾ ಮೊತ್ತವನ್ನು 532 ಕೋಟಿಯಿಂದ 1031 ಕೋಟಿ ರೂಪಾಯಿಗೆ ಏರಿಸಲಾಗಿದೆ ಎಂದ ಜೆಡಿಎಸ್ ನಾಯಕ ಕುಮಾರಸ್ವಾಮಿ, ಈ ಕುರಿತು ತನಿಖೆ ನಡೆಸುವಂತೆ ಕೇಂದ್ರ ಸರಕಾರದ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿರುವುದಾಗಿ ಹೇಳಿದರು.
ರಾಜಿಗೆ ಮುಂದಾಗಿದ್ದರು ಸಿಎಂ.... ಕಳೆದ ವಾರ ಪ್ರೇರಣಾ ಟ್ರಸ್ಟ್‌ಗೆ 27 ಕೋಟಿ ರೂ. ದೇಣಿಗೆ ಬಂದಿರುವ ವಿಷಯವನ್ನು ಪ್ರಸ್ತಾಪಿಸಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತನ್ನೊಂದಿಗೆ ರಾಜಿ ಮಾಡಿಕೊಳ್ಳಲು ಮುಂದಾಗಿದ್ದರು. ಅವರೇ ತಮ್ಮ ಆಪ್ತಸಹಾಯಕರ ಮೂಲಕ ನೇರವಾಗಿ ಮಾತುಕತೆ ಮಾಡಲು ಬಯಸಿದ್ದರು ಎಂದು ಕೂಡ ಕುಮಾರಸ್ವಾಮಿ ಹೇಳಿದರು.
ಇಷ್ಟಲ್ಲ, ಇನ್ನೂ ಇದೆ... ಹಗರಣಗಳು ಇಷ್ಟೇ ಅಲ್ಲ, ಯಡಿಯೂರಪ್ಪ ಸರಕಾರವು ದೆಹಲಿ ಮೂಲದ ರಿಯಾಲ್ಟಿ ಸಂಸ್ಥೆಗೆ ಸಂಬಂಧಿಸಿ ಇನ್ನೊಂದು ಹಗರಣದಲ್ಲಿಯೂ ಸಿಲುಕಿದ್ದು, ಸೂಕ್ತ ದಾಖಲೆ ಪತ್ರಗಳು ದೊರೆತ ಬಳಿಕ ವಿವರ ನೀಡುವುದಾಗಿಯೂ ಹೇಳಿದರು.