ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಒಪ್ಪಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಬಲಿಗರ ಸಭೆಯನ್ನು ಕರೆಯುವ ಅಗತ್ಯವಿರಲಿಲ್ಲ ಎಂದಿದ್ದಾರೆ.
ಶನಿವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷದೊಳಗೆ ಎರಡು ಗುಂಪುಗಳಿವೆ ಎಂಬುದು ಸುಳ್ಳು. ಕೆಲವು ಶಾಸಕರು ತಮ್ಮ ಬಳಿ, ಇನ್ನು ಕೆಲವು ಶಾಸಕರು ಯಡಿಯೂರಪ್ಪ ಅವರ ಬಳಿ ಹೋಗಿ ಪ್ರತ್ಯೇಕ ಮಾತುಕತೆ ನಡೆಸಿರುವುದು ನಿಜ. ಇದರಿಂದ ಎರಡು ಗುಂಪುಗಳಿವೆ ಎಂಬ ಭಾವನೆ ಬಂದಿರುವುದು ಸಹಜ ಎಂದರು.
ಯಾರದೇ ವಿರುದ್ಧ ಸಹಿ ಸಂಗ್ರಹಣೆ ನಡೆದಿಲ್ಲ. ಸಹಿ ಸಂಗ್ರಹಿಸುವಂತಹಾ ಸಂಸ್ಕೃತಿ ನಮ್ಮ ಬಿಜೆಪಿ ಪಕ್ಷದಲ್ಲೇ ಇಲ್ಲ ಎಂದ ಅವರು, ಈ ರೀತಿ ಆಗಬಾರದಿತ್ತು ಮತ್ತು ಇನ್ನು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಈ ವಿವಾದಗಳಿಗೆಲ್ಲಾ ಕೇಂದ್ರೀಯ ನಾಯಕರನ್ನಾಗಲೀ, ಆರೆಸ್ಸೆಸ್ ನಾಯಕರನ್ನಾಗಲೀ ಎಳೆದು ತರಬೇಡಿ ಎಂದು ಮಾಧ್ಯಮಗಳಿಗೆ ಕಿವಿ ಮಾತು ಹೇಳಿದ ಅವರು, ನಾವು ನಮ್ಮ ನಮ್ಮೊಳಗೆ ಕುಳಿತು ಚರ್ಚಿಸಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.