ಗುಲ್ಲೆಬ್ಬಿಸಿ ತಣ್ಣಗಾಗುವ ಲೋಕಾಯುಕ್ತ: ವೀರಪ್ಪ ಮೊಯ್ಲಿ ಟೀಕೆ
ಬೆಂಗಳೂರು, ಭಾನುವಾರ, 20 ಮಾರ್ಚ್ 2011( 09:36 IST )
ಲೋಕಾಯುಕ್ತರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ಲೋಕಾಯುಕ್ತರು ಮೊದಲು ಗುಲ್ಲೆಬ್ಬಿಸಿ ನಂತರ ತಣ್ಣಗಾಗುವ ಪ್ರವೃತ್ತಿ ನಿಲ್ಲಿಸಬೇಕೆಂದು ಕಿವಿಮಾತು ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಕೆಲವು ಸಚಿವರು ಅಕ್ರಮದಲ್ಲಿ ಭಾಗಿಯಾಗಿದ್ದು, ಅವರ ರಾಜೀನಾಮೆ ನೀಡಬೇಕು ಎಂದೆಲ್ಲಾ ಲೋಕಾಯುಕ್ತರು ಕೇಳುತ್ತಾರೆ. ಆದರೆ ಸ್ವಲ್ಪ ದಿನದ ಬಳಿಕ ಈ ಬಗೆಗೆ ಸೊಲ್ಲೆತ್ತುವುದೇ ಇಲ್ಲ ಎಂದು ಹೇಳಿದರು.
ಲೋಕಾಯುಕ್ತ ತನಿಖೆ ನಡೆಸಿ, ಯಾವುದೇ ಹಗರಣ, ಭ್ರಷ್ಟಾಚಾರ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಲ್ಪಿಸಿಕೊಡುವುದು ಅವರ ಕರ್ತವ್ಯ ಎಂದು ಮೊಯ್ಲಿ ನುಡಿದರು.
ಲೋಕಾಯುಕ್ತದವರು ಭ್ರಷ್ಟಾಚಾರದ ಬಗ್ಗೆ ಗುಲ್ಲೆಬ್ಬಿಸುತ್ತಾರೆ. ಸಾಕಷ್ಟು ಎಳೆದಾಡುತ್ತಾರೆ. ಆದರೆ ಅದನ್ನು ಅರ್ಧಕ್ಕೆ ಕೈ ಬಿಡುವುದು ಯಾಕೆ? ಭ್ರಷ್ಟಾಚಾರದ ನಿರ್ಮೂಲನೆಗಾಗಿರುವ ಸಂಸ್ಥೆಯು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅದು ಜನರ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.