ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನನಗೆ ಮೊಯ್ಲಿ ಸರ್ಟಿಫಿಕೇಟ್ ಬೇಕಾಗಿಲ್ಲ: ಲೋಕಾಯುಕ್ತ ಹೆಗ್ಡೆ (M Veerappa Moily | Santosh Hegde | Lokayukta | Karnataka)
ಈಗ ಕೇಂದ್ರ ಸಚಿವರಾಗಿರುವ ವೀರಪ್ಪ ಮೊಯ್ಲಿಯವರು ಹಗರಣವೊಂದರಲ್ಲಿ ದೋಷಮುಕ್ತರಾಗುವಂತೆ ವಾದ ಮಾಡಿದ್ದೇ ನಾನು. ನನ್ನ ಕಾರ್ಯವೈಖರಿ ಬಗ್ಗೆ ಮೊಯ್ಲಿಯಿಂದ ಸರ್ಟಿಫಿಕೇಟ್ ಬೇಕಾಗಿಲ್ಲ, ಜನತೆ ಕೊಟ್ಟರೆ ಸಾಕು. ಅದು ಮೊಯ್ಲಿ ಆಗಿರಲಿ ಅಥವಾ ಇನ್ಯಾವುದೇ ರಾಜಕಾರಣಿ ಆಗಿರಲಿ, ನಾನು ಯಾರಿಗೂ ಹೆದರಲ್ಲ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ತಿರುಗೇಟು ನೀಡಿದ್ದಾರೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಲೋಕಾಯುಕ್ತರ ವಿರುದ್ಧ ಮೊಯ್ಲಿ ಕತ್ತಿ ಮಸೆದಿದ್ದರು. ಲೋಕಾಯುಕ್ತರು ಸುಮ್ಮನೆ ಸದ್ದು ಮಾಡುವುದು ಬಿಟ್ಟರೆ ಕೆಲಸ ಮಾಡುತ್ತಿಲ್ಲ ಎಂಬ ಅರ್ಥದಲ್ಲಿ ಟೀಕಿಸಿದ್ದರು.

ಮೊಯ್ಲಿ ಟೀಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಲೋಕಾಯುಕ್ತರು, ನನಗೆ ಮೊಯ್ಲಿಯಿಂದ ಸರ್ಟಿಫಿಕೇಟ್ ಬೇಕಾಗಿಲ್ಲ. ಜನರಿಂದ ಸರ್ಟಿಫಿಕೇಟ್ ಸಿಕ್ಕರೆ ಸಾಕು. ಯಾರಿಗೂ ಹೆದರುವ ವ್ಯಕ್ತಿ ನಾನಲ್ಲ. ಅದು ಮೊಯ್ಲಿ ಇರಬಹುದು, ಯಾವುದೇ ಸಚಿವರಿರಬಹುದು ಅಥವಾ ಇನ್ಯಾವುದೇ ರಾಜಕಾರಣಿ ಆಗಿರಬಹುದು ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದರು.

ವಾಸ್ತವದಲ್ಲಿ ಮೊಯ್ಲಿಯವರು ಜೆಎಂಎಂ ಹಗರಣದಲ್ಲಿ ಸಿಲುಕಿದ್ದಾಗ, ಅವರನ್ನು ಪ್ರಕರಣದಿಂದ ಬಚಾವ್ ಮಾಡಿದ್ದೇ ನಾನು. ಅವರ ಪರ ವಾದ ಮಾಡಿ ದೋಷಮುಕ್ತಗೊಳಿಸಿದ್ದೆ. ಇದರಲ್ಲಿ ಅವರಿಂದ ಶುಲ್ಕದ ರೂಪದಲ್ಲಿ ನಯಾ ಪೈಸೆ ಪಡೆದಿರಲಿಲ್ಲ. ಬಹುಶಃ ಅದನ್ನು ಅವರು ಮರೆತಿದ್ದಾರೆ. ಅದನ್ನು ನೆನಪು ಮಾಡಿಕೊಳ್ಳಲಿ ಎಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಹೇಳಿದರು.

ಲೋಕಾಯುಕ್ತವು ಯಾವ ಪ್ರಕರಣವನ್ನು ಪೂರ್ತಿಗೊಳಿಸಿಲ್ಲ ಎಂದು ಮೊಯ್ಲಿಯವರು ನಿರ್ದಿಷ್ಟವಾಗಿ ಹೇಳಲಿ. ಯಾವ ಪ್ರಕರಣದ ವಿಚಾರಣೆಯನ್ನು ಕೈ ಬಿಡಲಾಗಿದೆ ಎಂದು ಉದಾಹರಣೆ ಕೊಡಲಿ. ಅವರ ಈ ಹೇಳಿಕೆಗೆ ಕಾರಣ ಏನು ಎಂದು ಗೊತ್ತಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಅಕ್ರಮ ಗಣಿಗಾರಿಕೆಯ ಕುರಿತ ತನಿಖೆಯ ಅಂತಿಮ ವರದಿಯನ್ನು ಮಾರ್ಚ್ 31ರೊಳಗೆ ನೀಡಲು ಅಸಾಧ್ಯ. ಈಗಲೂ ತನಿಖೆ ನಡೆಯುತ್ತಿದೆ. ಇನ್ನೊಂದು ತಿಂಗಳ ಒಳಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸಂತೋಷ್ ಹೆಗ್ಡೆ ಮಾಹಿತಿ ನೀಡಿದರು.
ಇವನ್ನೂ ಓದಿ