ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆ ಕಡೆ ಈಶ್ವರಪ್ಪ-ಅನಂತ್; ಈ ಕಡೆ ಸಿಎಂ ಮಾತ್ರ: ಏನಾಗಲಿದೆ? (BJP | Karnataka | BS Yeddyurappa | KS Eshwarappa)
ನನ್ನ ವಿರುದ್ಧ ಹಿಂದಿನಿಂದಲೂ ಕೆಲಸ ಮಾಡಿಕೊಂಡು, ಭಿನ್ನಮತೀಯರನ್ನು ಪ್ರೋತ್ಸಾಹಿಸಿಕೊಂಡು ಬಂದಿರುವ ಅನಂತ್ ಕುಮಾರ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪನವರು ಶಾಸಕರನ್ನು ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಲಿದ್ದಾರೆ.

ಇದನ್ನು ಬಿಜೆಪಿಯ ಆಪ್ತ ಮೂಲಗಳೇ ಹೇಳಿಕೊಂಡಿವೆ. ಸದಾ ಒಂದಲ್ಲ ಒಂದು ವಿಷಯವನ್ನು ಮುಂದಿಟ್ಟುಕೊಂಡು ನನ್ನ ವಿರುದ್ಧ ಮಸಲತ್ತು ಮಾಡಲಾಗುತ್ತಿದೆ. ಈ ಹಿಂದೆ ಜಗದೀಶ್ ಶೆಟ್ಟರ್ ಮೂಲಕ ಬಂಡಾಯ ಎಬ್ಬಿಸಿದ್ದ ಅನಂತ್ ಕುಮಾರ್ ಅವರು ಈಗ ಈಶ್ವರಪ್ಪ ಅವರನ್ನು ಹುರಿದುಂಬಿಸಿದ್ದಾರೆ. ಅವರ ಜತೆ ಹಲವರು ನನ್ನ ವಿರುದ್ಧ ತೊಡೆ ತಟ್ಟುತ್ತಿದ್ದಾರೆ ಎಂದಿರುವ ಸಿಎಂ, ಇದನ್ನು ತನ್ನ ಮೂರು ದಿನಗಳ ದೆಹಲಿ ಪ್ರವಾಸದ ಸಂದರ್ಭದಲ್ಲಿ ಪಕ್ಷದ ಹಿರಿಯರಿಗೆ ತಿಳಿಸಲಿದ್ದಾರೆ.

ಮೂಲಗಳ ಪ್ರಕಾರ ಅನಂತ್ ವಿರುದ್ಧ ಕೆಲ ದಿನಗಳ ಹಿಂದೆಯೂ ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ದೂರು ನೀಡಿದ್ದರು. ಅಲ್ಪಾವಧಿಯೊಳಗೆ ನೀಡುತ್ತಿರುವ ಎರಡನೇ ದೂರಿದು. ರಾಜ್ಯದಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಹೈಕಮಾಂಡ್‌ಗೆ ಅವರು ಮನವಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಹೈಕಮಾಂಡ್ ಒಡೆದ ಮನೆ...
ರಾಜ್ಯ ಬಿಜೆಪಿಯಲ್ಲಿನ ಪ್ರಸಕ್ತ ವಿದ್ಯಮಾನಗಳನ್ನು ನೋಡಿದರೆ, ಈಶ್ವರಪ್ಪನವರ ಕಡೆಗೆ ಹೆಚ್ಚು ತೂಕವಿದೆ. ಸಿ.ಟಿ. ರವಿ, ಆರ್. ಅಶೋಕ್, ಬಳ್ಳಾರಿ ರೆಡ್ಡಿಗಳು, ಅರವಿಂದ ಲಿಂಬಾವಳಿ, ಅದಕ್ಕಿಂತ ಹೆಚ್ಚಾಗಿ ಅನಂತ್ ಕುಮಾರ್ ರಾಜ್ಯಧ್ಯಕ್ಷರ ಜತೆಗಿದ್ದಾರೆ. ಇವರೆಲ್ಲರ ಜತೆಗಿರುವ ಶಾಸಕರ ಸಂಖ್ಯೆಯೂ ಕಡಿಮೆಯಲ್ಲ.

ಇದನ್ನು ಹೈಕಮಾಂಡ್‌ಗೆ ದೂರು ನೀಡಿ ಪರಿಹರಿಸೋಣವೆಂದರೆ, ಅಲ್ಲಿನ ಕಥೆಯೂ ಇದಕ್ಕಿಂತ ಭಿನ್ನವಲ್ಲ. ರಾಜ್ಯ ಬಿಜೆಪಿಯಲ್ಲಿರುವುದಕ್ಕಿಂತ ಹೆಚ್ಚಿನ ಭಿನ್ನಮತ ಅಲ್ಲಿದೆ. ಆದರೆ, ಅದು ರಾಜ್ಯದಂತೆ ಬಹಿರಂಗವಾಗುತ್ತಿಲ್ಲ, ಅಷ್ಟೇ.

ಮೂಲಗಳ ಪ್ರಕಾರ, ಯಡಿಯೂರಪ್ಪನವರ ಬೆನ್ನ ಹಿಂದೆ ಗಟ್ಟಿಯಾಗಿ ನಿಂತಿರುವುದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಮಾತ್ರ. ಉಳಿದಂತೆ ವರಿಷ್ಠ ಎಲ್.ಕೆ. ಆಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ... ಹೀಗೆ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. ನೀವು ಹೀಗೆ ಪ್ರತಿನಿತ್ಯ ಹಗರಣಗಳನ್ನು ಮಾಡುತ್ತಿದ್ದರೆ ನಾವು ಸಮರ್ಥಿಸುವುದಾರೂ ಹೇಗೆ ಎಂದು ಮುಖ ತಿರುಗಿಸುತ್ತಿದ್ದಾರೆ.

ಆಡ್ವಾಣಿಯವರು ಹೇಗೂ ಈಗ ಹಳೆಯ ಹುಲಿ. ಅವರ ಮಾತನ್ನು ಬಿಜೆಪಿಯ ಉನ್ನತ ವಲಯದಲ್ಲಿ ಹಿಂದಿನಂತೆ ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ. ಅವರ ಕಡೆಗಿನ ಗೌರವಕ್ಕೆ ದೊಡ್ಡ ಮಟ್ಟಿಗಿನ ಹೊಡೆತ ಬಿದ್ದಿಲ್ಲ. ಆದರೂ ಅವರದ್ದು ತೂಕದ ಮಾತು.

ಕೆಲವರ ಪ್ರಕಾರ ಅಂತಹ ಆಡ್ವಾಣಿಯವರ ಮಮತೆಯನ್ನು ಕೂಡ ಯಡಿಯೂರಪ್ಪ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಮೇಲೆ ಹಗರಣದ ಆರೋಪ ಬಂದ ನಂತರ ಆಡ್ವಾಣಿಯವರು ಮಾತೇ ಬಿಟ್ಟಿದ್ದಾರೆ.

ಇದೇ ನಡೆ ವೆಂಕಯ್ಯ ನಾಯ್ಡು ಅವರದ್ದು. ಯಡಿಯೂರಪ್ಪ ಬರುತ್ತಾರೆ ಎಂದಾಕ್ಷಣ ಮಾರು ದೂರ ಸರಿಯುವವರಲ್ಲಿ ನಾಯ್ಡು ಪ್ರಮುಖರು.

ಅತ್ತ ಸುಷ್ಮಾ ಅವರಂತೂ ಮೊದಲಿನಿಂದಲೂ ರಾಜ್ಯ ಬಿಜೆಪಿಯ ವಿರೋಧಿ ಗುಂಪಿನ ಸಾರಥಿಯಾಗಿದ್ದವರು. ರೆಡ್ಡಿಗಳನ್ನು ಪೋಷಿಸಿದ್ದು ಅವರೇ ಎನ್ನುವುದು ಜಗತ್ತಿಗೇ ಗೊತ್ತಿದೆ. ಅರುಣ್ ಜೇಟ್ಲಿಯವರು ಕೂಡ ಯಡಿಯೂರಪ್ಪ ಪರ ಒಲವು ಹೊಂದಿಲ್ಲ. ರಾಜ್ಯಸಭೆಯಲ್ಲಿ ಸಮರ್ಥನೆ ಮಾಡಿಕೊಂಡು ಅವರಿಗೂ ಸಾಕಾಗಿ ಹೋದಂತಿದೆ.

ರಾಜ್ಯದ ಬಿಜೆಪಿ ಉಸ್ತುವಾರಿ ಹೊಣೆ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಅವರಾದರೂ ಯಡಿಯೂರಪ್ಪ ಪರವಾಗಿದ್ದಾರೆಯೇ ಎಂದು ನೋಡಿದರೆ, ಅವರು ಮೊದಲಿನಿಂದಲೂ ಅನಂತ್ ಕುಮಾರ್ ಬೆಂಬಲಿಗ. ಯಾವತ್ತೂ ಅನಂತ್ ಬಿಟ್ಟು ಪ್ರಧಾನ್ ಇಲ್ಲ.

ಇಷ್ಟೆಲ್ಲ ವಿರೋಧಿಗಳಿದ್ದರೂ, ಯಡಿಯೂರಪ್ಪ ಜೀವದಾನ ಪಡೆದುಕೊಂಡಿದ್ದರೆ ಅದಕ್ಕೆ ಕಾರಣ ಹೈಕಮಾಂಡ್‌ನಲ್ಲಿ ಇರದ ಒಗ್ಗಟ್ಟು. ಅಲ್ಲಿನ ಭಿನ್ನಮತವನ್ನೇ ಲಾಭವನ್ನಾಗಿ ಮಾಡುತ್ತಿದ್ದಾರೆ ಯಡಿಯೂರಪ್ಪ. ಆ ಮೂಲಕ ಹೈಕಮಾಂಡ್ ಮತ್ತಷ್ಟು ದುರ್ಬಲವಾಗುತ್ತಿದೆ.

ಬೆಂಗಳೂರಲ್ಲೂ ಅತೃಪ್ತರ ಸಭೆ...
ಭಾನುವಾರ ಸಂಜೆಯೇ ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ. ಮಂಗಳವಾರ ಸಂಜೆಯವರೆಗೆ ಅವರು ದೆಹಲಿಯಲ್ಲೇ ಇರುತ್ತಾರೆ. ಸರ್ವಪಕ್ಷದ ನಿಯೋಗವನ್ನು ಪ್ರಧಾನ ಮಂತ್ರಿ ಮತ್ತಿತರರ ಬಳಿ ಕರೆದುಕೊಂಡು ಹೋಗುವ ನೆಪ ಮುಂದಿದೆ. ಅದರ ಬಳಿಕ ವರಿಷ್ಠರ ಭೇಟಿ.

ಇತ್ತ ಈಶ್ವರಪ್ಪ ನೇತೃತ್ವದಲ್ಲಿ ಭಿನ್ನಮತೀಯರ ಗುಂಪು ಸೋಮವಾರ ಸಂಜೆ ಎರಡನೇ ಸುತ್ತಿನ ಪ್ರಮುಖ ಮಾತುಕತೆ ನಡೆಸಲಿದೆ. ಮುಂದಿನ ನಡೆಗಳೇನು ಎಂಬುದರ ಕುರಿತು ಚರ್ಚೆ ಮಾಡಲಿದೆ.

ಮುಖ್ಯಮಂತ್ರಿ ಗುಂಪಿನಲ್ಲಿರುವ ಶಾಸಕರು-ಸಚಿವರುಗಳನ್ನು ಅತೃಪ್ತರ ಗುಂಪಿಗೆ ಸೆಳೆಯುವ ಯತ್ನಗಳೂ ನಡೆಯುತ್ತಿವೆ. ತಮಗಾಗಿರುವ ಅನ್ಯಾಯಗಳನ್ನು ಎತ್ತಿ ತೋರಿಸಿ, ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ತವಕದಲ್ಲಿ ಈ ಗುಂಪಿದೆ. ಮುಖ್ಯಮಂತ್ರಿಯವರ ಸರ್ವಾಧಿಕಾರಿ ಧೋರಣೆ, ಅಭಿವೃದ್ಧಿಗಳು ನಡೆಯದೇ ಇರುವುದು, ಹಗರಣಗಳಿಂದ ತಲೆ ಎತ್ತದ ಪರಿಸ್ಥಿತಿ ನಿರ್ಮಾಣವಾಗಿರುವುದು -- ಇವುಗಳು ಭಿನ್ನಮತೀಯರ ಮುಂದಿರುವ ಈಗಿನ ದೂರುಗಳು.

ಸಾಕಷ್ಟು ಶಾಸಕರ ಬಲವಿದ್ದರೂ, ಹಿಂದಿನಂತೆ ಬಹಿರಂಗವಾಗಿ ಬಂಡಾಯ ಏಳುವ ಸಾಧ್ಯತೆಗಳು ಕಡಿಮೆ. ಈಗಾಗಲೇ ದೆಹಲಿಗೆ ತೆರಳಿರುವ ಯಡಿಯೂರಪ್ಪ ಜತೆ ಹೈಕಮಾಂಡ್ ಯಾವ ರೀತಿ ನಡೆದುಕೊಳ್ಳುತ್ತದೆ? ಬುದ್ಧಿ ಮಾತನ್ನೇನಾದರೂ ಹೇಳಲಿದೆಯೇ? ಅದನ್ನು ಅವರು ಕೇಳುತ್ತಾರೆಯೇ ಎಂಬುದನ್ನೆಲ್ಲ ನೋಡಿಕೊಂಡು ಮುಂದುವರಿಯುವ ಒಲವು ಭಿನ್ನಮತೀಯರದ್ದು.

ಅಲ್ಲದೆ, ಯಾವ ರೀತಿಯಲ್ಲೂ ಪಕ್ಷಕ್ಕೆ ಹೊಡೆತ ಬೀಳಬಾರದು ಎಂಬ ದೂರದೃಷ್ಟಿಯೂ ಅತೃಪ್ತರಲ್ಲಿದೆ. ಈಗಾಗಲೇ ಸಿಎಂ ಮಕ್ಕಳ ಹಗರಣದಿಂದಾಗಿ ಪಕ್ಷ ಕುಲಗೆಟ್ಟು ಹೋಗಿದೆ. ಉಪ ಚುನಾವಣೆಯೂ ಎದುರಿಗಿರುವುದರಿಂದ, ಭಿನ್ನಮತ ತಾರಕಕ್ಕೆ ಏರುವುದು ಬೇಡ. ಯಾವ ಹಂತದಲ್ಲೂ ಸ್ಫೋಟದ ಪರಿಸ್ಥಿತಿ ಬೇಡ ಎಂಬ ಎಚ್ಚರಿಕೆಯೂ ಅವರ ಮಡಿಲಲ್ಲಿದೆ.

ಬಿಜೆಪಿಯೊಳಗಿನ ಈ ಆಂತರಿಕ ಕದನದಲ್ಲಿ ಸೋಲು-ಗೆಲುವು ಯಾರಿಗಾಗಲಿದೆ ಎಂಬುದನ್ನು ನೋಡಲು ಕೆಲ ಸಮಯ ಕಾಯಬೇಕಾದೀತು.
ಇವನ್ನೂ ಓದಿ