ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೆಡಿಎಸ್‌ಗೆ ಗೌಡ್ರ ಕುಟುಂಬ ಬಿಟ್ರೆ ಬೇರೆ ಗತಿ ಇಲ್ಲವೇ?: ಈಶ್ವರಪ್ಪ (JDS | Deve gowda | Kumaraswamy | BJP | Ishwarappa | Channa pattana)
ಜೆಡಿಎಸ್‌ಗೆ ಗೌಡ್ರ ಕುಟುಂಬ ಬಿಟ್ರೆ ಬೇರೆ ಗತಿ ಇಲ್ಲವೇ?: ಈಶ್ವರಪ್ಪ
ಬೆಂಗಳೂರು, ಸೋಮವಾರ, 21 ಮಾರ್ಚ್ 2011( 13:38 IST )
WD
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿರುವ ಬಗ್ಗೆ ರಾಜ್ಯ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಈ ಮೊದಲು ಮಧುಗಿರಿ ಉಪ ಚುನಾವಣೆ ಬಂದಾಗ ಜೆಡಿಎಸ್ ಪಕ್ಷ ಅನಿತಾಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿತ್ತು. ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧಿಸಲು ಮುಂದಾಗಿದ್ದಾರೆ. ಹಾಗಾದರೆ ಜೆಡಿಎಸ್‌ನಲ್ಲಿ ಬೇರೆ ಜನರೇ ಇಲ್ಲವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಕುಟುಂಬ ರಾಜಕಾರಣ ಬಿಟ್ಟರೆ, ಆ ಪಕ್ಷದ ಕಾರ್ಯಕರ್ತರಿಗೆ, ಹಿರಿಯ ಮುಖಂಡರಿಗೆ ಬೆಲೆಯೇ ಇಲ್ಲವೇ ಎಂದು ವಾಗ್ದಾಳಿ ನಡೆಸಿರುವ ಈಶ್ವರಪ್ಪ, ಸಂಸದರಾಗಿರುವ ಕುಮಾರಸ್ವಾಮಿ ವಿಧಾನಸಭೆಗೆ ಯಾಕೆ ಬರಬೇಕು. ಮಾಜಿ ಮುಖ್ಯಮಂತ್ರಿಯಾದ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬುದು ಸರಿಯಲ್ಲ ಎಂದು ಸೋಮವಾರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.
ಒಟ್ಟಾರೆ ಜೆಡಿಎಸ್ ಪಕ್ಷಕ್ಕೆ ತಾನೇ ಉಸಿರು, ಆ ಪಕ್ಷಕ್ಕೆ ಬೇರೆಯವರನ್ನು ನಿಲ್ಲಿಸಿ ಗೆಲ್ಲಿಸುವ ಶಕ್ತಿ ಇಲ್ಲ. ಹಾಗಾಗಿ ತಾನೇ ಸ್ಪರ್ಧಿಸಿ ಗೆಲ್ಲಬೇಕು ಎಂಬು ಭಾವನೆ ಅವರಲ್ಲಿ ಇದೆಯೋ ಏನೋ ಎಂದು ವ್ಯಂಗ್ಯವಾಡಿದರು. ಆದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಈಗಾಗಲೇ ಸಿ.ಪಿ.ಯೋಗೀಶ್ವರ್ ಅವರು ಎರಡು ಬಾರಿ ಸೋತಿದ್ದಾರೆ. ಅವರ ಬಗ್ಗೆ ಜನರಿಗೆ ಅನುಕಂಪ ಇದೆ. ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಯೋಗೀಶ್ವರ್ ಈ ಬಾರಿ ಗೆಲುವು ಸಾಧಿಸುವುದು ಖಚಿತ ಎಂದು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್‌ನ ಅಶ್ವತ್ಥ್ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ತೆರವಾದ ಮೂರು ಕ್ಷೇತ್ರಕ್ಕೆ ಏಪ್ರಿಲ್ 13ರಂದು ಉಪ ಚುನಾವಣೆ ನಡೆಯಲಿದೆ. ಆದರೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದು, ಶತಾಯಗತಾಯ ಗೆಲ್ಲಲೇಬೇಕೆಂಬ ಪಣ ತೊಟ್ಟಿದೆ. ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್ ಸ್ಪರ್ಧಿಸಲಿದ್ದಾರೆ. ಏತನ್ಮಧ್ಯೆ ಜೆಡಿಎಸ್‌ನಿಂದ ಕುಮಾರಸ್ವಾಮಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆದರೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಪಸ್ವರ ಎತ್ತಿದ್ದಾರೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡುವುದಾಗಿ ಹೇಳಿದೆ.