ರಾಜ್ಯ ರಾಜಕಾರಣದಲ್ಲಿನ ಆರೋಪ-ಪ್ರತ್ಯಾರೋಪ ಮುಂದುವರಿದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಂಡದಂಗಡಿ ಮುಂದೆ ಕುಡುಕರು ಮಾತನಾಡುವಂತೆ ಮಾತನಾಡುತ್ತಿದ್ದಾರೆ. ಅಲ್ಲದೇ ಬೀದಿ ನಾಯಿ ಹಾಗೆ ಬೊಗಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತನ್ನ ವಿರುದ್ಧದ ಒಂದೇ ಒಂದು ಪ್ರಕರಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಬೀತುಪಡಿಸಿದರೆ ತಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಘೋಷಿಸಿದರು.
ನಾನು ಮುಖ್ಯಮಂತ್ರಿ ವಿರುದ್ಧ ಯಾವುದೇ ಆಧಾರ ರಹಿತವಾದ ಆರೋಪ ಮಾಡಿಲ್ಲ. ಆದರೆ ಮುಖ್ಯಮಂತ್ರಿಗಳು ನನ್ನ ವಿರುದ್ಧ ಹಿಟ್ ಅಂಡ್ ರನ್ ಎಂಬಂತೆ ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ಈವರೆಗೂ ಒಂದೇ ಒಂದು ದಾಖಲೆಯನ್ನು ಹೊರಹಾಕದೆ, ಅಪ್ಪ-ಮಕ್ಕಳು ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂದು ಬಾಯಿಗೆ ಬಂದಂತೆ ಆರೋಪಿಸುತ್ತಿರುವುದಾಗಿ ಕಿಡಿಕಾರಿದರು.
ಆ ನಿಟ್ಟಿನಲ್ಲಿ ಇನ್ನು ಮುಂದಾದರೂ ಯಡಿಯೂರಪ್ಪ ಕುಡುಕರಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದ ಆಕ್ರೋಶ ವ್ಯಕ್ತಪಡಿಸಿದ ಅವರು, ಯಡಿಯೂರಪ್ಪ ಒಬ್ಬ ಬೀದಿ ನಾಯಿಯಂತೆ ಅದು ಕೇವಲ ಬೊಗಳುತ್ತೆ ವಿನಃ ಕಚ್ಚುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
500 ಕೋಟಿ ರೂಪಾಯಿ ಸಂಪಾದನೆ:ಯಡಿಯೂರಪ್ಪ ಅವರು 2008ರ ಅಕ್ಟೋಬರ್‌ನಿಂದ 2010ರ ಅಕ್ಟೋಬರ್‌ವರೆಗೆ 106 ಪ್ರಕರಣಗಳಲ್ಲಿ 221.34 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ. ಇದಕ್ಕಾಗಿ ಅವರು ಮತ್ತು ಅವರ ಮಕ್ಕಳು 500 ಕೋಟಿ ರೂಪಾಯಿ ಹಣವನ್ನು ಆಸ್ತಿ ಮತ್ತು ಚೆಕ್ ರೂಪದಲ್ಲಿ ಪಡೆದಿದ್ದಾರೆ ಎಂದು ದೂರಿದರು.
ಈ ಜಮೀನಿನ ಒಟ್ಟು ಮೌಲ್ಯ 3768.90 ಕೋಟಿ ಎಂದು ಆರೋಪಿಸಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ 237 ಎಕರೆ ಜಮೀನನ್ನು ಡಿನೋಟಿಫೈ ಮಾಡಲಾಗಿದ್ದು, ಇಂತಹ ಜಮೀನನ್ನು ತಮ್ಮ ಕುಟುಂಬದ ಸದಸ್ಯರು ಖರೀದಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿರುವ ಒಂದೇ ಒಂದು ನಿವೇಶನ ತೋರಿಸಿದರು ರಾಜಕೀಯ ನಿವೃತ್ತಿ ಪಡೆಯುವುದಾಗಿ ಯಡಿಯೂರಪ್ಪನವರಿಗೆ ಸವಾಲು ಹಾಕಿದರು.
ಮುಖ್ಯಮಂತ್ರಿಗಳು ತಾನು ಮಾಡಿದ ಹಗರಣವನ್ನು ಮುಚ್ಚಿಹಾಕಿಕೊಳ್ಳಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಮುರ್ಡೆಶ್ವರ ಪವರ್ ಕಾರ್ಪೋರೇಷನ್ ಯೋಜನೆಗೆ ನಾನು ಅನುಮತಿ ನೀಡಿದ್ದೇನೆ ಎಂದು ಸಿಎಂ ಹೇಳುತ್ತಾರೆ.
ಆ ಪ್ರೊಜೆಕ್ಟ್‌ನ ಟೆಂಡರ್ ಕರೆದದ್ದು ನನ್ನ ಅವಧಿಯಲ್ಲೇ, ಆದರೆ ಅದಕ್ಕೆ ಅನುಮತಿ ಸಿಕ್ಕಿದ್ದು 2007ರ ಅಕ್ಟೋಬರ್ 12ರಂದು, ಆ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆಗಿರಲಿಲ್ಲ. ಆ ಟೆಂಡರ್‌ಗೆ ಗ್ರೀನ್ ಸಿಗ್ನಲ್ ಕೊಟ್ಟವರು ಕೂಡ ಬಿ.ಎಸ್.ಯಡಿಯೂರಪ್ಪ (2008ರ ಸೆಪ್ಟೆಂಬರ್ 30) ಎಂದು ಕುಮಾರಸ್ವಾಮಿ ತಿಳಿಸಿದರು.
ಡಿಕೆಶಿ, ಧರಂಸಿಂಗ್ ಯಾಕೆ ಬಾಯ್ಬಿಡುತ್ತಿಲ್ಲ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 106 ಪ್ರಕರಣಗಳಲ್ಲಿ 221 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದರು. ಅದರಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಪುತ್ರ ಚಂದ್ರಸಿಂಗ್ ಹಾಗೂ ಡಿ.ಕೆ.ಶಿವಕುಮಾರ್ ಕೂಡ ತಮ್ಮ ಪ್ರಭಾವ ಬೀರಿ ಜಮೀನನ್ನು ಡಿನೋಟಿಫೈ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಅವರೂ ಕೂಡ ಮುಖ್ಯಮಂತ್ರಿ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದರು.