ಆಡಳಿತಾರೂಢ ಬಿಜೆಪಿಯಲ್ಲಿನ ಭಿನ್ನಮತ ತೀವ್ರ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಈ ಎಲ್ಲಾ ಪಿತೂರಿ ಹಿಂದಿರುವ ರಾಜ್ಯದ ಸಂಸದರೊಬ್ಬರ (ಅನಂತ್ ಕುಮಾರ್ ?) ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆಂದು ಮೂಲವೊಂದು ತಿಳಿಸಿದೆ.
ಪಕ್ಷದಲ್ಲಿ ಪದೇ, ಪದೇ ಭಿನ್ನಮತ ಉದ್ಭವಿಸಲು ರಾಜ್ಯಕ್ಕೆ ಸೇರಿರುವ ರಾಷ್ಟ್ರೀಯ ನಾಯಕರೊಬ್ಬರು ಕಾರಣ. ಇವರಿಗೆ ಅಂಕುಶ ಹಾಕುವಂತೆ ಮುಖ್ಯಮಂತ್ರಿಗಳು ಪಕ್ಷದ ವರಿಷ್ಠರಾದ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ ಅವರಲ್ಲಿ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಪಕ್ಷದ ಮುಖಂಡರಿಂದಲೇ ಆಗಾಗ್ಗೆ ನಡೆಯುತ್ತಿರುವ ಈ ಭಿನ್ನಮತ ಚಟುವಟಿಕೆಗಳು ಪಕ್ಷ ಹಾಗೂ ಸರಕಾರದ ವರ್ಚಸ್ಸಿಗೆ ಹಾನಿ ಮಾಡುತ್ತಿದೆ. ಈ ಮುಖಂಡರಿಗೆ ಬುದ್ದಿ ಹೇಳಿ ಎಂದು ವರಿಷ್ಠರಿಗೆ ದೂರು ನೀಡಲಿದ್ದಾರೆಂದು ಮುಖ್ಯಮಂತ್ರಿಯವರ ಆಪ್ತ ಮೂಲಗಳು ತಿಳಿಸಿವೆ. ಪಕ್ಷದ ಈ ರಾಷ್ಟ್ರೀಯ ಮುಖಂಡರು ವಿನಾಃ ಕಾರಣ ರಾಜ್ಯ ರಾಜಕಾರಣದಲ್ಲಿ ಗೊಂದಲ ಸೃಷ್ಟಿಸಿ, ಪಕ್ಷದಲ್ಲಿರುವ ತಮ್ಮ ವಿರೋಧಿಗಳಿಗೆ ಕುಮ್ಮಕ್ಕು ನೀಡಿ,ತಮ್ಮ ವಿರುದ್ಧ ಸದಾ ಭಿನ್ನಮತ ಇರುವಂತೆ ನೋಡಿಕೊಳ್ಳುವ ಚಾಳಿಯನ್ನು ಮುಂದುವರಿಸುತ್ತಿದ್ದಾರೆ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಆ ನಾಯಕ ಮೂಗು ತೂರಿಸದಂತೆ ತಾಕೀತು ಮಾಡಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ ಬೆಂಗಳೂರಿನ ಕೇಶವಕೃಪಾದಲ್ಲಿ ಆರ್ಎಸ್ಎಸ್ ಮುಖಂಡರು, ಬಿಜೆಪಿಯಲ್ಲಿ ತಲೆದೋರಿರುವ ಭಿನ್ನಮತ ಶಮನ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಪಕ್ಷದ ಮುಖಂಡರೇ ಭಿನ್ನಮತ ಹುಟ್ಟು ಹಾಕೋದು ಸರಿಯಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ.