ವರದಕ್ಷಿಣೆ ಕಿರುಕುಳ, ದಾಂಪತ್ಯ ವಿರಸ ಹೀಗೆ ಹಲವು ಕಾರಣಗಳಿಗೆ ವಿಚ್ಛೇದನ ಪಡೆಯುವುದು ಸಹಜ. ಆದರೆ ಗ್ರಾಮ ಪಂಚಾಯ್ತಿ ಅಧ್ಯಕ್ಷಗಾದಿ ಪಡೆಯಲು ತುಮಕೂರು ಜಿಲ್ಲೆಯ ಪಾವಗಡದ ವೈ.ಎನ್. ಹೊಸಕೋಟೆ ಗ್ರಾ.ಪಂ.ನ ಸುಜಾತಾ ಎಂಬಾಕೆ ಗಂಡನಿಂದ ವಿವಾಹ ವಿಚ್ಛೇದನ ಪಡೆದು ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಪತಿ ಸರಕಾರಿ ಹುದ್ದೆಯಲ್ಲಿರುವ ಕಾರಣ ಮೀಸಲಾತಿ ದೊರೆಯದು ಎಂಬ ಕಾರಣದಿಂದ ಕೇವಲ 15 ದಿನಗಳಲ್ಲಿ ಸುಜಾತಾ ಗಂಡನಿಂದ ವಿಚ್ಛೇದನ ಪಡೆದದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವಿವಾದ ಸದ್ಯ ಹೈಕೋರ್ಟ್ ಕಟಕಟೆಯಲ್ಲಿದೆ. 2011ರ ಫೆಬ್ರುವರಿ 17ರಂದು ಸುಜಾತಾ ವಿಚ್ಛೇದನ ಕೋರಿ ಮಧುಗಿರಿ ಜೆಎಂಎಫ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ನಿಯಮದಂತೆ ಏಪ್ರಿಲ್ 2ರಂದು ವಿಚ್ಛೇದನ ಅರ್ಜಿ ವಿಚಾರಣೆಗೆ ಬರಬೇಕಿತ್ತು. ಆದರೆ, ಸುಜಾತಾ ಮೊದಲೇ ಅರ್ಜಿಯನ್ನು ಮಾ.3ರಂದು ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದ್ದರು. ಹಾಗಾಗಿ ಅವರಿಗೆ ಅಂದೇ ವಿಚ್ಛೇದನ ಸಿಕ್ಕಿತ್ತು.
ಅಂತೂ ಅಧಿಕಾರಕ್ಕಾಗಿ ಗಂಡನಿಂದ ವಿಚ್ಛೇದನ ಪಡೆದ ಜೆಡಿಎಸ್ ಬೆಂಬಲಿತ ಸುಜಾತಾ ಎದುರಾಳಿಗಳನ್ನು ಕೇವಲ 1 ಮತಗಳಿಂದ ಸೋಲಿಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಟ್ಟವನ್ನು ಏರಿದ್ದಾರೆ.