ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಭಿನ್ನಮತದಿಂದ ತತ್ತರಿಸುತ್ತಿದ್ದು, ಇದು ರಾಜ್ಯಕ್ಕೆ ಶಾಪವಾಗಿ ಪರಿಣಮಿಸಿದೆ ಎಂದು ವಿಧಾನಪರಿಷತ್ ನಾಯಕಿ, ಕಾಂಗ್ರೆಸ್ ಧುರೀಣೆ ಮೋಟಮ್ಮ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳದೆ ಆಂತರಿಕ ಬೇಗುದಿಯಲ್ಲಿ ಬೇಯುತ್ತಿರುವ ಬಿಜೆಪಿಗೆ ಭಿನ್ನಮತದ ಭೂತ ಕಾಡುತ್ತಿದೆ. ಇಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತ ದೆಹಲಿಗೆ ತೆರಳುತ್ತಿರುವ ನಾಯಕರು ಹೈಕಮಾಂಡ್‌ಗೆ ದೂರು ನೀಡಿ, ತಮ್ಮ ವೈಖರಿಯನ್ನು ಮೂಗಿನ ನೇರಕ್ಕೆ ವಿವರಿಸಿ ವಾಪಸಾಗುತ್ತಿದ್ದಾರೆ. ದೆಹಲಿಯಲ್ಲಿರುವುದು ನೋಕಮಾಂಡ್ ಮತ್ತು ಲೋ ಕಮಾಂಡ್ ಎಂದು ವ್ಯಂಗ್ಯವಾಡಿದರು.
ಕಳೆದ ಮೂರು ವರ್ಷಗಳಿಂದ ಬಿಜೆಪಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿದೆ. ಇದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದ್ದರೂ ಅದನ್ನು ಸರಿಪಡಿಸಲು ಸಾಧ್ಯವಾಗದೆ ಹೈಕಮಾಂಡ್ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿದೆ. ಬಹುಶಃ ಭಿನ್ನಮತದ ಬೆಂಕಿ ಅವರನ್ನು ಕಾಡುತ್ತಿದೆ ಎಂಬ ಸಂಶಯ ಜನರಲ್ಲಿ ಕಾಡುತ್ತದೆ ಎಂದ ಅವರು, ಭ್ರಷ್ಟಾಚಾರದ ಹಣದಲ್ಲಿ ಅವರಿಗೂ ಪಾಲಿದೆ ಎಂಬ ಶಂಕೆ ಮೂಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದ ಅಭಿವೃದ್ಧಿಗೆ ವಿರೋಧ ಪಕ್ಷಗಳಿಂದ ಯಾವುದೇ ಅಡ್ಡಿಯಾಗುತ್ತಿಲ್ಲ. ಅದು ಅಡ್ಡಿಯಾಗುತ್ತಿರುವುದು ಬಿಜೆಪಿ ಪಕ್ಷದ ಕೆಲವು ಸಚಿವರು, ಸಂಸದರಿಂದ ಎಂಬುದು ಎಲ್ಲರಿಗೂ ತಿಳಿದ ಸತ್ಯವಾಗಿದೆ ಎಂದರು.