ಬಿಜೆಪಿ ಹೈಕಮಾಂಡನ್ನೇ ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿರುವ ಮತ್ತು ಅದು ಹೌದೆಂದು ಸಾಬೀತುಪಡಿಸಿ ತೋರಿಸಿರುವ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪಟ್ಟದಿಂದ ಎಳೆದು ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ. ಯಾರು ಏನೇ ಅಂದರೂ 'ಬದಲಾವಣೆ ಜಗನಿಯಮ' ಎಂಬಂತೆ ಭಿನ್ನರು ಪಟ್ಟು ಸಡಿಲಿಸದೆ, 'ವ್ಯಕ್ತಿಗಿಂತ ಪಕ್ಷ ಮುಖ್ಯ' ಎಂಬ ಸಂದೇಶವನ್ನು ಹೈಕಮಾಂಡ್‌ಗೆ ಬಲವಾಗಿಯೇ ರವಾನಿಸಿದ್ದಾರೆ.
ಇದಕ್ಕೆ ಮತ್ತಷ್ಟು ಉಪ್ಪು-ಖಾರವೆಂಬಂತೆ ಯಡಿಯೂರಪ್ಪ ವಿರುದ್ಧದ ಭೂ ಹಗರಣ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಒಪ್ಪಿಸಿರುವುದು. ಇದು ಮುಖ್ಯಮಂತ್ರಿಗೆ ಒಂದು ಹಂತದಲ್ಲಿ ಆಗಿರುವ ಸೋಲು ಎಂದೇ ಭಿನ್ನಮತೀಯರು ಪರಿಗಣಿಸಿದ್ದಾರೆ. ಅದನ್ನೇ ಬಿಜೆಪಿ ವರಿಷ್ಠರಿಗೆ ಮನದಟ್ಟು ಮಾಡುತ್ತಿದ್ದಾರೆ. ಇದರೊಂದಿಗೆ ಬಿಜೆಪಿಯ ಭಿನ್ನಮತ ಜ್ವರ ಉಲ್ಬಣಗೊಂಡಿದೆ, ತೀವ್ರ ಸ್ವರೂಪಕ್ಕೆ ತಲುಪಿದೆ, ತಾರಕಕ್ಕೇರಿದೆ.
ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ, ಸಾಕಷ್ಟು ಹಗರಣಗಳಿಂದ-ಸ್ವಜನ ಪಕ್ಷಪಾತಗಳಿಂದ ಮುಳುಗಿರುವ ಯಡಿಯೂರಪ್ಪನವರನ್ನು ಬದಲಾಯಿಸಲೇಬೇಕು ಎಂಬ ಬೇಡಿಕೆಗೆ ಗಟ್ಟಿಯಾಗಿ ಅಂಟಿಕೊಂಡಿರುವ ಭಿನ್ನರ ಬಣ ಗುರುವಾರ ದೆಹಲಿಯಲ್ಲಿ ಮೂವರು ಬಿಜೆಪಿ ಮುಖಂಡರನ್ನು ಭೇಟಿ ಮಾಡಿದೆ. ಬದಲಾವಣೆಯ ಬೇಡಿಕೆಯನ್ನು ತಾವು ಯಾಕೆ ಇಷ್ಟೊಂದು ಪರಿಣಾಮಕಾರಿಯಾಗಿ ವ್ಯಕ್ತಪಡಿಸುತ್ತಿದ್ದೇವೆ ಎನ್ನುವುದಕ್ಕೆ ದಾಖಲೆಗಳನ್ನೇ ಮುಂದಿಡಲಾಗುತ್ತಿದೆ.
ಇಕ್ಕಟ್ಟಿನಲ್ಲಿ ಸಿಎಂ-ಹೈಕಮಾಂಡ್... ಭಿನ್ನರ ಪಟ್ಟು ಬಿಗಿಯಾಗಿರುವುದು ಮತ್ತು ಭಿನ್ನಮತ ಬೀದಿಗೆ ಬಂದಿರುವುದು ಕೇವಲ ಯಡಿಯೂರಪ್ಪನವರಿಗೆ ಮಾತ್ರ ಸಂಕಟ ತಂದಿರುವುದಲ್ಲ. ಬದಲಿಗೆ ಅವರನ್ನು ಈ ಹಿಂದೆ ರಕ್ಷಿಸಿದ್ದ ಮತ್ತು ಅವರನ್ನು ಬಿಟ್ಟರೆ ಬೇರೆ ಯಾರೂ ನಾಯಕರಿಲ್ಲ ಅಂದುಕೊಂಡಿದ್ದ ಹೈಕಮಾಂಡ್‌ಗೂ ಪೀಕಲಾಟ ತಂದಿದೆ. ಮುಂದೇನು ಮಾಡುವುದು ಎನ್ನುವುದೇ ಗೊಂದಲಕ್ಕೆ ಕಾರಣವಾಗಿದೆ.
ಗುರುವಾರ ಬೆಳಿಗ್ಗೆ ದೆಹಲಿಗೆ ತಲುಪಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ನೇತೃತ್ವದ ಭಿನ್ನಮತೀಯ ಗುಂಪು, ದೆಹಲಿಯಲ್ಲೇ ಇದ್ದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಸೇರಿಕೊಂಡು ಮಧ್ಯಾಹ್ನದ ಹೊತ್ತಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮನೆಯಲ್ಲಿ ಸಭೆ ನಡೆಸಿತು.
ಈ ಸಭೆಗೆ ಕರ್ನಾಟಕ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಕೂಡ ಆಗಮಿಸಿದರು. ವರಿಷ್ಠರ ಮುಂದೆ ಇಡಬೇಕಾದ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಕೊನೆಗೆ ಆರೋಪಗಳನ್ನು ಪಟ್ಟಿ ಮಾಡಿ, ಇತರ ದಾಖಲೆಗಳನ್ನು ಸಲ್ಲಿಸುವ ನಿರ್ಧಾರಕ್ಕೆ ಬರಲಾಯಿತು. ಈ ಸಭೆಯಲ್ಲಿ ಜನಾರ್ದನ ರೆಡ್ಡಿ, ಅರವಿಂದ ಲಿಂಬಾವಳಿ, ಸಂಸದ ಪ್ರಹ್ಲಾದ್ ಜೋಷಿ ಮತ್ತು ಸಿ.ಟಿ. ರವಿ ಕೂಡ ಪಾಲ್ಗೊಂಡಿದ್ದರು.
ಕರ್ನಾಟಕ ಬಿಜೆಪಿಯ ಈ ಏಳು ಮಂದಿ ನಾಯಕರು ಮೊದಲು ಭೇಟಿಯಾಗಿದ್ದು ರಾಜನಾಥ್ ಸಿಂಗ್ ಅವರನ್ನು. ಬಳಿಕ ರಾತ್ರಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಕಂಡು ಮಾತನಾಡಿಸಿತು. ಭಿನ್ನರ ಮಾತುಗಳನ್ನು ತಾಳ್ಮೆಯಿಂದಲೇ ಕೇಳಿಸಿಕೊಂಡ ಗಡ್ಕರಿಯವರು, ಯಾವುದೇ ಭರವಸೆಯನ್ನು ನೀಡಲಿಲ್ಲ. ಆದರೆ ಸೂಕ್ತ ಸಂದರ್ಭದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಅಲ್ಲದೆ, ಪ್ರಸಕ್ತ ಲೋಕಾಯುಕ್ತ ಪೊಲೀಸರ ಕೈಗೆ ಹೋಗಿರುವ ಭೂಹಗರಣ ಪ್ರಕರಣದಲ್ಲಿ ಸಿಎಂ ವಿರುದ್ಧ ಕ್ರಿಮಿನಲ್ ಕೇಸು ಏನಾದರೂ ದಾಖಲಾದರೆ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಆಶ್ವಾಸನೆ ಆ ಕಡೆಯಿಂದ ಬಂತು.
ಈಶ್ವರಪ್ಪ-ಶೆಟ್ಟರ್-ಅನಂತ್ ನೇತೃತ್ವದ ಏಳು ಮಂದಿಯ ಭಿನ್ನರ ತಂಡಕ್ಕೆ ಈಗ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಎಸ್.ಎ. ರಾಮದಾಸ್ ಕೂಡ ಸೇರಿಕೊಂಡಿದ್ದಾರೆ. ಇನ್ನೂ ಕೆಲವರು ಸೇರಿಕೊಳ್ಳುವ ಸಾಧ್ಯತೆಗಳಿವೆ. ಬಿಜೆಪಿಯ ಈ ಬಣ ಇಂದು ವರಿಷ್ಠ ಎಲ್.ಕೆ. ಆಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮುಂತಾದವರನ್ನು ಭೇಟಿ ಮಾಡಲಿದೆ.
ಯಡ್ಡಿ ವಿರುದ್ಧ ಸಚಿವರ ಆಕ್ರೋಶ... ಅತ್ತ ಭಿನ್ನಮತೀಯರು ದೆಹಲಿಗೆ ತೆರಳುತ್ತಿದ್ದಂತೆ ಬೆಂಗಳೂರಿನಲ್ಲಿ ಯಡಿಯೂರಪ್ಪ ಸಭೆ ನಡೆಸಿದ್ದು ಭಿನ್ನಮತ ಹತ್ತಿಕ್ಕಲು. ನಾಯಕತ್ವ ಬದಲಾವಣೆ ಪಟ್ಟು ಹಿಡಿದಿರುವವರನ್ನು ಯಾವ ರೀತಿಯಿಂದಲಾದರೂ ಮಣಿಸಬಹುದೇ ಎಂದು ಪರೀಕ್ಷಿಸಲು. ಆದರೆ ಇದು ಬಹುತೇಕ ವಿಫಲವಾಗಿದೆ. ಸ್ವತಃ ಯಡಿಯೂರಪ್ಪನವರಿಗೇ ಇದು ಸಭೆಯಲ್ಲಿ ಅನುಭವಕ್ಕೆ ಬಂತು.
ಪ್ರಗತಿ ಕಾರ್ಯ ಪರಿಶೀಲನೆ ಹೆಸರಿನಲ್ಲಿ ಸಚಿವರ ಸಭೆ ಕರೆದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರೆದುರು 27 ಸಚಿವರಲ್ಲಿ 21 ಮಂದಿ ಹಾಜರಾಗಿದ್ದರು. ಆದರೆ ಇದನ್ನು ಸಿಎಂ ಗೆಲುವೆಂದು ಪರಿಗಣಿಸಬೇಕಿಲ್ಲ. ಯಾಕೆಂದರೆ ಅಷ್ಟೂ ಮಂದಿ ಸೇರಿದವರಲ್ಲಿ ಬಹುತೇಕ ಮಂದಿ ಬಂದಿದ್ದೇ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು.
ಈ ಹಿಂದೆ ಎಂದೂ ಮುಖ್ಯಮಂತ್ರಿ ವಿರುದ್ಧ ಸಚಿವರು ಎದುರೇ ಅಸಮಾಧಾನ ವ್ಯಕ್ತಪಡಿಸಿದ್ದಿಲ್ಲ. ಆದರೆ ನಿನ್ನೆ ಸರಕಾರದ ಕಾರ್ಯವೈಕರಿ, ಮಾತು ಕೇಳದ ಅಧಿಕಾರಿಗಳು, ಸಚಿವರ ಗಮನಕ್ಕೆ ತರದೆ ಸಂಪುಟದ ಮುಂದೆ ವಿಷಯಗಳನ್ನು ಮಂಡಿಸುತ್ತಿರುವುದು, ಕೃಷಿ ಹೂಡಿಕೆದಾರರ ಸಮಾವೇಶ -- ಹೀಗೆ ಹಲವು ವಿಚಾರಗಳಲ್ಲಿ ಸಿಎಂ ಅವರನ್ನು ಪರೋಕ್ಷವಾಗಿ ಸಚಿವರು ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಸಿಎಂ ತೀರಾ ಮುಜುಗರಕ್ಕೀಡಾದರು. ಆದರೂ ಧೃತಿಗೆಡದೆ ಧೈರ್ಯ ಪ್ರದರ್ಶಿಸಿದ ಯಡಿಯೂರಪ್ಪ, ಹೀಗೆ ಮಾತಿಗೆ ಆರಂಭಿಸಿದವರನ್ನು ತಡೆದರು. ಇಲ್ಲಿ ನಡೆಯುತ್ತಿರುವುದು ಸಮಸ್ಯೆ ಪರಿಹಾರ ಸಭೆಯಲ್ಲ. ಆ ಸಭೆ ನಡೆಸಿದಾಗ ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಿ ಎಂದರು ಎಂದು ಗೊತ್ತಾಗಿದೆ.
ಸಚಿವರಾದ ಸುರೇಶ್ ಕುಮಾರ್, ಉಮೇಶ್ ಕತ್ತಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮುಂತಾದ ಹಿರಿಯರೇ ಮುಖ್ಯಮಂತ್ರಿ ವಿರುದ್ಧ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಬೆದರಿಕೆ ಹಾಕಿದ ಸಿಎಂ... ಈ ನಡುವೆ ದೆಹಲಿಗೆ ಹೋಗುವ ಸಚಿವರನ್ನು ಸಂಪುಟದಿಂದ ಕೈ ಬಿಡುವ ಬೆದರಿಕೆಯೂ ಯಡಿಯೂರಪ್ಪನವರಿಂದ ಬಂದಿದೆ. ಅದನ್ನು ಉತ್ತರ ಕರ್ನಾಟಕ ಮೂಲದ ಸಚಿವರೊಬ್ಬರ ಮೂಲಕ ಸಿಎಂ ತಲುಪಿಸುವ ಯತ್ನ ಮಾಡಿದ್ದಾರೆ.
ನಿನ್ನೆ ಸಭೆ ಆರಂಭಕ್ಕೂ ಮುನ್ನ ಈ ಸಂದೇಶವನ್ನು ಯಡಿಯೂರಪ್ಪ ರವಾನಿಸಿದರು. ನಿಮ್ಮಂತಹವರನ್ನು ಬಿಜೆಪಿ ವರಿಷ್ಠರಿಗೆ ದೂರು ನೀಡಲು ಬಳಸಿಕೊಳ್ಳಲಾಗುತ್ತಿದೆ. ಆದರೆ ನಾನು ಇದಕ್ಕೆಲ್ಲ ಬಗ್ಗೋದಿಲ್ಲ. ಯಾರಿಂದಲೂ ಅಷ್ಟು ಸುಲಭದಲ್ಲಿ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಇದು ನೆನಪಿರಲಿ ಎಂದು ಭಿನ್ನರಿಗೆ ಎಚ್ಚರಿಕೆ ರವಾನಿಸಿದರು.