ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಭಿನ್ನಮತಕ್ಕೆ ಬ್ರೇಕ್; ಮೇ 4ರವರೆಗೆ ಸಿಎಂ ಸೇಫ್ (BJP | Yeddyurappa | Ishwarappa | High commond | Lokayuktha | Land scam)
ಬಿಜೆಪಿ ಭಿನ್ನಮತಕ್ಕೆ ಬ್ರೇಕ್; ಮೇ 4ರವರೆಗೆ ಸಿಎಂ ಸೇಫ್
ಬೆಂಗಳೂರು, ಶುಕ್ರವಾರ, 25 ಮಾರ್ಚ್ 2011( 16:34 IST )
WD
'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧದ ಭೂ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಬರಲಿ. ಅಲ್ಲಿಯವರೆಗೆ ಕಾಯಿರಿ' ಎಂದು ಬಿಜೆಪಿ ಹೈಕಮಾಂಡ್ ಭಿನ್ನಮತೀಯರಿಗೆ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಸಿಎಂಗೆ ಮತ್ತೆ ಜೀವದಾನ ಮಾಡಿದೆ. ಆದರೆ ನಾಯಕತ್ವ ಬದಲಾವಣೆಗೆ ಸಾಕಷ್ಟು ಕಸರತ್ತು ನಡೆಸಿದ ಬಿಜೆಪಿ ಭಿನ್ನಮತೀಯರಿಗೆ ಮತ್ತೊಮ್ಮೆ ಮುಖಭಂಗವಾದಂತಾಗಿದೆ.
ಭೂ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ನೀಡುವಂತೆ ಲೋಕಾಯುಕ್ತ ಕೋರ್ಟ್ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ. ಆ ಹಿನ್ನೆಲೆಯಲ್ಲಿ ತನಿಖಾ ವರದಿ ಬಂದ ನಂತರವೇ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅತೃಪ್ತರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಮೂರು ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ, ಈ ಸಂದರ್ಭದಲ್ಲಿ ಅನಾವಶ್ಯಕವಾಗಿ ಅಪಸ್ವರ ಎತ್ತುವ ಮೂಲಕ ಗೊಂದಲ ಹುಟ್ಟು ಹಾಕಬೇಡಿ ಎಂದು ಹೈಕಮಾಂಡ್ ಭಿನ್ನಮತೀಯ ಶಾಸಕರಿಗೆ ಎಚ್ಚರಿಕೆಯ ಸಂದೇಶ ನೀಡಿದೆ ಎನ್ನಲಾಗಿದೆ.
ಮೇ 4ರವರೆಗೆ ಕಾದು ನೋಡಿ ಆ ಮೇಲೆ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಹೈಕಮಾಂಡ್ ಅತೃಪ್ತರಿಗೆ ಭರವಸೆ ನೀಡಿರುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಶಾಸಕ ಸಿ.ಟಿ.ರವಿ, ಅರವಿಂದ ಲಿಂಬಾವಳಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಏತನ್ಮಧ್ಯೆ ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿ, ಶಾಸಕರು, ಸಚಿವರು ದೂರಿನ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಈಶ್ವರಪ್ಪ ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿರುದ್ಧದ ಶಾಸಕರ, ಸಚಿವರ ದೂರಿನ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆನ್ನಲಾಗಿದೆ.
ವರದಿ ಬರಲಿ, ಆಮೇಲೆ ನೋಡೋಣ-ಈಶ್ವರಪ್ಪ: ಬಿಜೆಪಿ ಮುಖಂಡರ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲ್ಲುವ ಕುರಿತು ಸಮಾಲೋಚನೆ ನಡೆಸಿದ್ದೇವೆ. ಆದರೆ ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಅಷ್ಟೇ ಅಲ್ಲ ಎ.ರಾಜಾ ಪ್ರಕರಣಕ್ಕೂ, ಯಡಿಯೂರಪ್ಪ ಪ್ರಕರಣಕ್ಕೂ ತಳುಕು ಹಾಕುವುದು ಸರಿಯಲ್ಲ ಎಂದರು.
ಭೂ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೋರ್ಟ್ ಆದೇಶಿಸಿದೆ. ಹಾಗಾಗಿ ಆರು ವಾರಗಳ ನಂತರ ವರದಿ ಕೊಟ್ಟ ನಂತರ ನೋಡುವಾ ಎಂದು ಹೇಳುವ ಮೂಲಕ ಪಕ್ಷದೊಳಗಿನ ಭಿನ್ನಮತದ ಇಲ್ಲ ಎಂಬುದಾಗಿ ಸಮಜಾಯಿಷಿ ನೀಡಿದರು.
ಈಶ್ವರಪ್ಪ-ನಾನು ಆಪ್ತಮಿತ್ರ: ಯಡಿಯೂರಪ್ಪ ಪಕ್ಷದೊಳಗೆ ಯಾವುದೇ ಭಿನ್ನಮತವಿಲ್ಲ. ನನ್ನ ನಾಯಕತ್ವದ ಬಗ್ಗೆಯೂ ಯಾರಿಗೂ ಯಾವುದೇ ಅಸಮಾಧಾನವಿಲ್ಲ. ಇದೆಲ್ಲಾ ಮಾಧ್ಯಮಗಳ ಊಹಾಪೋಹ ಎಂದು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾನು ಮತ್ತು ಈಶ್ವರಪ್ಪ ಈಗಲೂ ಆಪ್ತಮಿತ್ರರು. ಇನ್ನು ಮುಂದೆಯೂ ಆಪ್ತರಾಗಿಯೇ ಇರುತ್ತೇವೆ. ಸುಮ್ಮನೆ ಅನಾವಶ್ಯಕವಾದ ಗಾಳಿ ಸುದ್ದಿಗೆಲ್ಲ ನನ್ನಲ್ಲಿ ಪ್ರತಿಕ್ರಿಯೆ ಕೇಳಬೇಡಿ ಎಂದು ಸಿಎಂ ತಿರುಗೇಟು ನೀಡಿದರು.
ಅನಾವಶ್ಯಕವಾಗಿ ಸೃಷ್ಟಿ ಮಾಡಿಕೊಂಡ ಸುದ್ದಿಗೆಲ್ಲ ಪ್ರತಿಕ್ರಿಯೆ ಕೊಡಲ್ಲ. ರಾಜ್ಯದ ಅಭಿವೃದ್ಧಿ ಕುರಿತು ಹೆಚ್ಚಿನ ಆದ್ಯತೆ ಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ನನ್ನ ಗುರಿ ಎಂದರು.