ಐದು ವರ್ಷ ಪೂರ್ತಿಗೊಳಿಸುತ್ತೇನೆ, ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಯಾವ ಮಾತುಗಳೂ ನಿಜವಾಗುವ ಸಾಧ್ಯತೆಗಳಿಲ್ಲ. ಈ ಹಿಂದಿನಂತೆ ವರಿಷ್ಠರು ಹೇಳಿದ ಕೂಡಲೇ ಭಿನ್ನರು ಸುಮ್ಮನಾಗುತ್ತಿಲ್ಲ, ಅದಕ್ಕಿಂತಲೂ ಹೆಚ್ಚಾಗಿ ಭಿನ್ನರು ಹೇಳಿದ್ದನ್ನು ವರಿಷ್ಠರು ಹಗುರವಾಗಿ ಪರಿಗಣಿಸುತ್ತಿಲ್ಲ.
ಇದು ಸದ್ಯಕ್ಕೆ ಜೀವದಾನ ಪಡೆದಿರುವ ಯಡಿಯೂರಪ್ಪನವರ ಕಥೆ-ವ್ಯಥೆ. ಅವರಿಗಿರುವ ಹಲವು 'ಬಲ'ಗಳಿಂದಾಗಿ ಬದಲಾವಣೆ ಸುಲಭವಾಗುತ್ತಿಲ್ಲ. ಸರಕಾರ ಉರುಳಿಸುತ್ತೇನೆ, ಪಕ್ಷವನ್ನು ವಿಭಜಿಸುತ್ತೇನೆ ಎಂಬ ಬೆದರಿಕೆಗಳ ಹೊರತಾಗಿಯೂ, ಸ್ವಾಮೀಜಿಗಳಿಂದ ಮತ್ತು ಲಿಂಗಾಯತ ಮುಖಂಡರಿಂದ ಬರುತ್ತಿರುವ ಒತ್ತಡಗಳು, ಜತೆಗೆ ಅವರಿಗಿರುವ ಜನ ಬೆಂಬಲ, ಹೋರಾಟದ ಹಿನ್ನೆಲೆ ಇದಕ್ಕೆ ಪ್ರಮುಖ ಕಾರಣಗಳು.
ಆದರೆ, ಅವೆಲ್ಲವನ್ನೂ ನಿಭಾಯಿಸುವ ರೀತಿಯಲ್ಲಿ ಯಡಿಯೂರಪ್ಪನವರಿಗೆ ಹೇಗೆ 'ಬೀಳ್ಕೊಡುಗೆ' ನೀಡಬಹುದು ಎಂಬ ದಾರಿಯನ್ನು ಈಗ ಬಿಜೆಪಿ ಹೈಕಮಾಂಡ್ ಹುಡುಕುತ್ತಿದೆ. ಗೌರವಯುತ ನಿರ್ಗಮನ ಹೇಗೆ ಸಾಧ್ಯವಿದೆ ಎಂಬ ಚಿಂತನೆಯಲ್ಲಿದೆ.
ಆ ನಿಟ್ಟಿನಲ್ಲಿ ತಕ್ಷಣ ಸಿಗುವ ಪರಿಹಾರವೆಂದರೆ ಇನ್ನೊಬ್ಬ ಲಿಂಗಾಯತರಿಗೆ ಮುಖ್ಯಮಂತ್ರಿ ಪಟ್ಟವನ್ನು ನೀಡುವುದು. ಯಡಿಯೂರಪ್ಪರಂತಹ ಇನ್ನೊಬ್ಬ, ಅವರಷ್ಟೇ ಬಲಶಾಲಿಯಾಗಿರುವ ಸಮರ್ಥ ನಾಯಕರ ಕೊರತೆಯಿರುವುದರಿಂದ ಇತರ ಆಯ್ಕೆಗಳನ್ನು ಪರಿಗಣಿಸುವುದು ಸುಲಭವಲ್ಲ. ಆದರೂ ಲೋಕಾಯುಕ್ತರ ವರದಿಯನ್ನು ಆಧರಿಸಿ ಮುಂದಿನ ನಡೆ ಎಂದು ಬಿಜೆಪಿ ಉನ್ನತ ವಲಯ ಯೋಚಿಸುತ್ತಿದೆ.
ಇದನ್ನೇ ಭಿನ್ನಮತೀಯರಿಗೂ ಸೂಚ್ಯವಾಗಿ ಹೇಳಲಾಗಿದೆ. ನಿಮ್ಮ ಅಭಿಪ್ರಾಯಗಳನ್ನು, ಕಳವಳಗಳನ್ನು ನಾವು ಹಗುರವಾಗಿ ಪರಿಗಣಿಸಿಲ್ಲ. ನೋಡೋಣ, ಕಾಲ ಬಂದಾಗ ಎಲ್ಲದಕ್ಕೂ ಉತ್ತರಿಸುತ್ತೇವೆ. ಸದ್ಯಕ್ಕೆ ತಾಳ್ಮೆಯಿಂದಿರಿ ಎಂದು ವರಿಷ್ಠರು ತಿಳಿಸಿದ್ದಾರೆ.
ಸಿಎಂ ಬದಲಾವಣೆಯಿಲ್ಲ: ಪ್ರಧಾನ್ ಈ ನಡುವೆ ಶುಕ್ರವಾರ ರಾತ್ರಿ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದಿಲ್ಲ. ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದರು.
ರಾಜ್ಯ ಬಿಜೆಪಿ ಸರಕಾರದ ನಾಯಕತ್ವ ಬದಲಾವಣೆ ಪ್ರಶ್ನೆ ನಮ್ಮ ಮುಂದಿಲ್ಲ. ಆ ಕುರಿತು ಚರ್ಚೆಗಳೇ ನಡೆದಿಲ್ಲ. ಎಲ್ಲವೂ ವದಂತಿ ಮಾತ್ರ ಎಂದು ಈಶ್ವರಪ್ಪ ಜತೆ ಮಾತುಕತೆಯ ನಂತರ ಪ್ರಕಟಿಸಿದರು.
ಬಿಜೆಪಿ ಒಡೆದ ಮನೆ, ಒಂದಾಗುವುದು ಅಸಾಧ್ಯ... ಆರಕ್ಕೂ ಹೆಚ್ಚು ಬಾರಿ ಭಿನ್ನಮತದ ರುಚಿ ಕಂಡಿರುವ ಯಡಿಯೂರಪ್ಪನವರ ವಿರುದ್ಧದ ಹೋರಾಟವನ್ನು ಭಿನ್ನರ ಬಣ ಕೈ ಬಿಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ದಿನದಿಂದ ದಿನಕ್ಕೆ ಭಿನ್ನರ ಗುಂಪಿಗೆ ಪ್ರಬಲರು, ಮೂಲ ನಿಷ್ಠಾವಂತರು, ಕಟ್ಟಾ ಬಿಜೆಪಿಗರು ಸೇರ್ಪಡೆಗೊಳ್ಳುತ್ತಿರುವುದು ಇದಕ್ಕೆ ಕಾರಣ.
ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಮತ್ತು ಅನಂತ್ ಕುಮಾರ್ ಎಂಬ ಮೂವರು ಘಟಾನುಘಟಿ ನಾಯಕರ ಮುಂದಾಳುತ್ವದಲ್ಲಿ ಪ್ರಸಕ್ತ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದೆ. ವರಿಷ್ಠರು ಕಟ್ಟುನಿಟ್ಟಿನ ಸೂಚನೆ ನೀಡಿರುವ ಹೊರತಾಗಿಯೂ, ಇಷ್ಟೆಲ್ಲ ರಾದ್ಧಾಂತಗಳು ನಡೆದ ನಂತರ ಒಂದೇ ತಟ್ಟೆಯಲ್ಲಿ ಊಟ ಮಾಡುವ ಸಾಧ್ಯತೆಗಳು ಅಷ್ಟರಲ್ಲೇ ಇದೆ. ಮತ್ತೆ ಕೆಲ ದಿನಗಳ ನಂತರ ಇದೇ ರೀತಿ ಪರಿಸ್ಥಿತಿ ಉದ್ಭವಿಸಬಹುದು ಎಂದು ಹೇಳಲಾಗುತ್ತಿದೆ.
ಮಾರ್ಚ್ 30ಕ್ಕೆ ಇನ್ನೊಂದು ಗಡುವು... ಕೆಲವು ಮೂಲಗಳ ಪ್ರಕಾರ ಯಡಿಯೂರಪ್ಪನವರ ಹಣೆಬರಹ ನಿರ್ಧಾರ ಮಾರ್ಚ್ 30ರಂದೇ ನಡೆಯುತ್ತದೆ. ಹಲವು ಫಲಿತಾಂಶಗಳನ್ನು ಆಧರಿಸಿ ಅಂದು ಪ್ರಮುಖ ನಿರ್ಧಾರಕ್ಕೆ ವರಿಷ್ಠರು ಬರುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧದ ದೂರು, ವಿಶೇಷ ನ್ಯಾಯಾಲಯದ ಆದೇಶ, ಲೋಕಾಯುಕ್ತ ಪೊಲೀಸರು ನೀಡಲಿರುವ ವರದಿಗಳ ಕುರಿತು ಗಮನ ಹರಿಸಲಿರುವ ಬಿಜೆಪಿ ಉಸ್ತುವಾರಿ ಪ್ರಧಾನ್, ಈ ಕುರಿತು ವರಿಷ್ಠರಿಗೆ ವರದಿಯೊಂದನ್ನು ನೀಡಲಿದ್ದಾರೆ. ನಂತರ ಮಾರ್ಚ್ 30ರಂದು ನಡೆಯುವ ಸಂಸದೀಯ ಮಂಡಳಿ ಸಭೆಯಲ್ಲಿ ಯಾವುದಾದರೂ ನಿರ್ಧಾರ ಹೊರ ಬೀಳಬಹುದು ಅಥವಾ ಮೇ 4ರವರೆಗೆ ಕಾಯಬಹುದು.
ಉಪ ಚುನಾವಣೆ ಮುಗಿಯುವ ತನಕ ಸುಮ್ಮನಿರಿ ಎಂದು ಒಂದು ಕಡೆ ಭಿನ್ನರಿಗೆ ಹೈಕಮಾಂಡ್ ಹೇಳಿದೆಯಾದರೂ, ಅದಕ್ಕೂ ಮೊದಲೇ ಬದಲಾವಣೆ ಮಾಡಿದರೂ ಅಚ್ಚರಿಯಿಲ್ಲ. ಆದರೆ ಯಾವುದೇ ಕ್ರಮ ಕೈಗೊಳ್ಳುವುದಿದ್ದರೂ, ಯಡಿಯೂರಪ್ಪನವರಿಗೆ ನೋವಾಗುವಂತೆ ಇರುವುದಿಲ್ಲ. ಅಪಮಾನವಾಗುವಂತೆ ಇರುವುದಿಲ್ಲ ಎಂದು ಭಿನ್ನರ ಮೂಲಗಳು ಹೇಳುತ್ತಿವೆ.
ಯಡಿಯೂರಪ್ಪ ದೆಹಲಿಗೆ... ಮೇಲ್ನೋಟಕ್ಕೆ ಯಡಿಯೂರಪ್ಪ ಬದಲಾವಣೆಯಿಲ್ಲ ಎಂಬ ವಾತಾವರಣವನ್ನು ನಿರ್ಮಿಸಲು ಹೈಕಮಾಂಡ್ ಯತ್ನಿಸುತ್ತಿದೆಯಾದರೂ, ಯಡಿಯೂರಪ್ಪನವರನ್ನು ಬದಲಾಯಿಸುವ ಕುರಿತ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದಕ್ಕಾಗಿ ಇರುವ ಅಡೆತಡೆಗಳನ್ನು ನಿವಾರಿಸುವ ಕೆಲಸಕ್ಕೆ ಕೈ ಹಾಕಲಾಗಿದೆ.
ಅವರನ್ನು ಗೌರವಯುತವಾಗಿ ಕಳುಹಿಸಿಕೊಡುವುದು ಹೇಗೆ ಎಂಬುದರ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿರುವ ಹೈಕಮಾಂಡ್ ಮತ್ತೆ ಯಡಿಯೂರಪ್ಪನವರಿಗೆ ಬುಲಾವ್ ಕಳುಹಿಸಿದೆ. ಆದರೆ ಅದಕ್ಕೆ ವಕೀಲ ನಾರಿಮನ್ ಭೇಟಿಯ ಹೆಸರನ್ನು ನೀಡಲಾಗಿದೆ. ಶನಿವಾರ ಮಧ್ಯಾಹ್ನ ಅವರು ದೆಹಲಿಗೆ ಹೋಗುತ್ತಿದ್ದಾರೆ.
ಈ ಸಂದರ್ಭದಲ್ಲಿ ಮತ್ತೆ ಯಡಿಯೂರಪ್ಪನವರಲ್ಲಿ ವರಿಷ್ಠರು ವಿವರಣೆ ಕೇಳುವ ಸಾಧ್ಯತೆಗಳಿವೆ. ಭಿನ್ನರು ನೀಡಿರುವ ದೂರಿನ ಸಂಬಂಧ ಮುಖ್ಯಮಂತ್ರಿಯನ್ನು ಪ್ರಶ್ನಿಸಬಹುದು ಎಂದು ಹೇಳಲಾಗುತ್ತಿದೆ.