ಭೂ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ತನಿಖೆಗೆ ವಿಶೇಷ ನ್ಯಾಯಾಲಯ ನೀಡಿರುವ ಆದೇಶದ ಪ್ರತಿ ಲೋಕಾಯುಕ್ತ ಪೊಲೀಸರಿಗೆ ಶುಕ್ರವಾರ ತಲುಪಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸೇರಿದಂತೆ ಆರೋಪಿಗಳ ಪಟ್ಟಿಯಲ್ಲಿರುವ ಎಲ್ಲರ ಮೇಲೂ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವ ಸಂಬಂಧ ಸೋಮವಾರ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಲೋಕಾಯುಕ್ತ ಎಡಿಜಿಪಿ ಆರ್.ಕೆ.ಗುಪ್ತಾ ತಿಳಿಸಿದ್ದಾರೆ.
ಜಸ್ಟೀಸ್ ಲಾಯರ್ಸ್ ಫೋರಂನ ವಕೀಲರಾದ ಸಿರಾಜಿನ್ ಬಾಷಾ ದಾಖಲಿಸಿದ್ದ ಮೊದಲ ಖಾಸಗಿ ದೂರಿನ ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿದ್ದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ.ಹಿಪ್ಪರಗಿ, ಯಡಿಯೂರಪ್ಪ ವಿರುದ್ಧದ ಆರೋಪಗಳ ಬಗ್ಗೆ ಲೋಕಾಯುಕ್ತ ತನಿಖೆಗೆ ಗುರುವಾರ ಆದೇಶ ನೀಡಿದ್ದರು.
ಶುಕ್ರವಾರ ನ್ಯಾಯಾಲಯದ ಆದೇಶ ಮತ್ತು ದೂರಿನೊಂದಿಗೆ ಅರ್ಜಿದಾರರು ಸಲ್ಲಿಸಿರುವ ದಾಖಲೆಗಳ ಪ್ರತಿಗಳನ್ನು ಲೋಕಾಯುಕ್ತ ಪೊಲೀಸರಿಗೆ ನೀಡಲಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆದ ಎರಡು ಡಿನೋಟಿಫಿಕೇಷನ್ ಮತ್ತು ಸಾರ್ವಜನಿಕ ರಸ್ತೆಯನ್ನು ನಿವೇಶನವನ್ನಾಗಿ ಪರಿವರ್ತಿಸಿರುವ ಪ್ರಕರಣಗಳನ್ನು ಮುಖ್ಯಮಂತ್ರಿ ವಿರುದ್ಧದ ಮೊದಲ ಖಾಸಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ, ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿ ಅಳಿಯ ಆರ್.ಎನ್.ಸೋಹನ್ ಕುಮಾರ್, ಮಾಲೂರು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಹಾಗೂ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಡೆವಲಪರ್ಸ್ ಆರೋಪಿಗಳು ಎಂದು ಅರ್ಜಿದಾರರು ದೂರಿದ್ದರು.
ಯಡಿಯೂರಪ್ಪನನ್ನು ವಜಾಗೊಳಿಸಿ-ಕಾಂಗ್ರೆಸ್ ಭೂ ಹಗರಣಗಳ ಆರೋಪ ಹೊತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು. ಪ್ರಕರಣದ ಕುರಿತಂತೆ ಲೋಕಾಯುಕ್ತ ಪೊಲೀಸರು ಇಂದು ಎಫ್ಐಆರ್ ದಾಖಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.