'ಗೆದ್ದು ಬಾ ಇಂಡಿಯಾ...ಗೆದ್ದು ಬಾ...' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ತಂಡಕ್ಕೆ ಅವರು ಶುಭ ಹಾರೈಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡದ ಹುಡುಗರಿಗೆ ವಿಶ್ವಕಪ್ ಗೆಲ್ಲುವ ಶಕ್ತಿ ಇದೆ. ಹಾಗಾಗಿ ಭಾರತ ತಂಡ ವಿಶ್ವಕಪ್ ಗೆದ್ದು ಬರಲಿ ಎಂದರು.
ನಗರದಲ್ಲಿ ಭಾನುವಾರ ಕೆಂಗಲ್ ಹನುಮಂತಯ್ಯನವರ ಸಮಗ್ರ ಜೀವನ ಚರಿತ್ರೆ ಪುಸ್ತಕ ಲೋಕಾರ್ಪಣೆ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆ ಎಂದು ಹೇಳಿದರು. ನಾಡು ಹಾಗೂ ರಾಷ್ಟ್ರದ ಜನತೆಯ ಪರವಾಗಿ ಭಾರತೀಯ ತಂಡಕ್ಕೆ ಶುಭ ಹಾರೈಸುತ್ತಿದ್ದೇನೆ. ವಿಶ್ವಕಪ್ ಕಿರೀಟವನ್ನು ಭಾರತ ತಂಡ ಮುಡಿಗೇರಿಸಿಕೊಂಡು ಬರಲಿ ಎಂದು ತಿಳಿಸಿದರು.
ಸದಾ ರಾಜಕೀಯ, ನೈಸ್, ಹೋರಾಟ, ಭ್ರಷ್ಟಾಚಾರದ ಬಗ್ಗೆಯೇ ಮಾತನಾಡುತ್ತಿದ್ದ ಗೌಡರು, ಸುದ್ದಿಗಾರರು ವಿಶ್ವಕಪ್ ಬಗ್ಗೆ ಕೇಳಿದ ಪ್ರಶ್ನೆಗೆ ನಗುತ್ತ ಈ ರೀತಿ ಪ್ರತಿಕ್ರಿಯಿಸಿದ್ದು ವಿಶೇಷವಾಗಿತ್ತು.