'ನಾನು ಭಿನ್ನಮತೀಯ ನಾಯಕನಲ್ಲ, ಕೇವಲ ದೆಹಲಿಗೆ ಹೋಗಿ ಬಂದ ಮಾತ್ರಕ್ಕೆ ನನಗೆ ಭಿನ್ನಮತೀಯ ನಾಯಕನ ಪಟ್ಟವನ್ನು ಪತ್ರಿಕೆಗಳು ಕಟ್ಟಿದರೆ ನಾನೇನು ಮಾಡಲಾಗುವುದಿಲ್ಲ. ನಾನು ಭಿನ್ನಮತ ಚಟುವಟಿಕೆ ನಡೆಸಿಯೂ ಇಲ್ಲ ಅದರ ನಾಯಕನೂ ನಾನಲ್ಲ'...ಹೀಗೆಂದು ತಮ್ಮನ್ನು ತಾವೇ ಸಮರ್ಥಿಸಿಕೊಂಡವರು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ.
ಬೆಳಗಾವಿಗೆ ತೆರಳುವ ಮುನ್ನ ನಗರದ ವಿಮಾನದ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಚಿವರು ಹಾಗೂ ಶಾಸಕರು ತಮ್ಮ ಅಸಮಾಧಾನಗಳನ್ನು ನನ್ನ ಮುಂದೆ ತೋಡಿಕೊಂಡಿದ್ದರು. ಅವುಗಳನ್ನು ವರಿಷ್ಠರ ಗಮನಕ್ಕೆ ತರುವುದಕ್ಕಾಗಿ ಮಾತ್ರ ದೆಹಲಿಗೆ ತೆರಳಿದ್ದೆ. ಅದೇ ಕಾರಣಕ್ಕೆ ಭಿನ್ನಮತೀಯ ನಾಯಕನೆಂದು ಹಣೆಪಟ್ಟಿ ಕಟ್ಟುವುದು ಸರಿಯಲ್ಲ ಎಂದು ಹೇಳಿದರು.
ಶನಿವಾರ ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಸಚಿವರು ಮತ್ತು ಶಾಸಕರು ಗೈರು ಹಾಜರಾದ ಬಗ್ಗೆ ಕೇಳಿದ ಪ್ರಶ್ನೆಗೆ ಅದೇನು ದೊಡ್ಡ ವಿಷಯವಲ್ಲ. ಬೇರೆ, ಬೇರೆ ಕೆಲಸಗಳಲ್ಲಿ ಅವರು ನಿರತರಾಗಿರುವುದರಿಂದ ಬಾರದೇ ಇರಬಹುದು. ಅದನ್ನು ನಾನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಪುನರುಚ್ಚರಿಸಿದ ಈಶ್ವರಪ್ಪ, ಹಳ್ಳಿಗಳ ಮಟ್ಟದಲ್ಲೂ ಪಕ್ಷವನ್ನು ಬಲಪಡಿಸಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವುದೇ ನಮ್ಮ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದರು