ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿ ಸರಕಾರದ ಅಸ್ತಿತ್ವಕ್ಕೆ ನಾವೇ ಕಾರಣ: ರೆಡ್ಡಿ ಗುಡುಗು (BJP | Janardana Reddy | Yeddyurappa | Ballary | Ishwarappa | Dispute)
ಬಿಜೆಪಿ ಸರಕಾರದ ಅಸ್ತಿತ್ವಕ್ಕೆ ನಾವೇ ಕಾರಣ: ರೆಡ್ಡಿ ಗುಡುಗು
ಬಳ್ಳಾರಿ, ಸೋಮವಾರ, 28 ಮಾರ್ಚ್ 2011( 09:14 IST )
WD
'ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಬಳ್ಳಾರಿ ನಾಯಕರೇ ಕಾರಣ. ಇದನ್ನು ರಾಜ್ಯ ಮತ್ತು ಹೈಕಮಾಂಡ್ ಮುಖಂಡರು ಅರಿಯಲಿ' ಎಂದು ಪ್ರವಾಸೋದ್ಯಮ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕುವ ಮೂಲಕ ಬಿಜೆಪಿಯಲ್ಲಿನ ಭಿನ್ನಮತ ಬಯಲಾದಂತಾಗಿದೆ.
ಭಾನುವಾರ ಬಳ್ಳಾರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಆಂತರಿಕ ವಿದ್ಯಮಾನಗಳಿಂದ ನೋವು ಅನುಭವಿಸುವಂತಾಗಿದೆ. ಬಳ್ಳಾರಿ ಮತ್ತು ನಮ್ಮನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಅಷ್ಟೇ ಅಲ್ಲ ಬಿಜೆಪಿಯಲ್ಲೇ ಕಾಲೆಳೆಯುವವರಿದ್ದಾರೆ. ಅಂಥವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೈಕಮಾಂಡ್‌ಗೆ ಸಲಹೆ ನೀಡಿದರು.
ರೆಡ್ಡಿ ಸಹೋದರರೆಂದರೆ ಅಕ್ರಮ ಮಾಡುವವರು ಎಂಬಂತೆ ಬಿಂಬಿಸಲಾಗಿದೆ. ಆರೋಪಗಳನ್ನು ಎದುರಿಸಿ ಸಾಕಾಗಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ರೆಡ್ಡಿ, ಇನ್ನು ಯಾವುದೇ ಗಣಿಗಾರಿಕೆಗೆ ಅನುಮತಿ ನೀಡುವುದು ಬೇಡ. ಬಳ್ಳಾರಿಯಲ್ಲಿನ ಗಣಿಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರವೇ ನಡೆಸಲಿ ಎಂದರು.
ಅನಾವಶ್ಯಕವಾಗಿ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ನಡೆಸುತ್ತಾರೆ, ಭಿನ್ನಮತ ಹುಟ್ಟು ಹಾಕುತ್ತಾರೆ ಎಂಬ ಅಪವಾದ ಹಾಕುವುದು ಬೇಡ.ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಎಂದು ವಿನಂತಿ ಮಾಡಿಕೊಂಡರು.