ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕುಟುಂಬ ವರ್ಗದ ವಿರುದ್ಧದ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಚಾರಣೆಯ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಸಿಎಂ ಅಳಿಯ ಸೋಹನ್ ಕುಮಾರ್ ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ.
ಭೂ ಹಗರಣದ ಕುರಿತಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮೂರು ಪ್ರಕರಣಗಳಿಗೆ ಮಾತ್ರ ಅನುಮತಿ ನೀಡಿದ್ದರು. ಆದರೆ ದೂರುದಾರರು ಅನುಮತಿಯನ್ನು ದುರ್ಬಳಕೆ ಮಾಡಿಕೊಂಡು ದೂರು ನೀಡಿರುವುದಾಗಿ ಸೋಹನ್ ಕುಮಾರ್ ದೂರುವ ಮೂಲಕ ಭೂ ಹಗರಣ ಪ್ರಕರಣ ಮತ್ತೊಂದು ತಿರುವು ಪಡೆಯತೊಡಗಿದೆ.
ಲೋಕಾಯುಕ್ತ ಕೋರ್ಟ್‌ಗೆ ನೀಡಿರುವ ದೂರಿನಲ್ಲಿ ರಾಜ್ಯಪಾಲರ ಅನುಮೋದನೆಯನ್ನು ನಮೂದಿಸಿಲ್ಲ. ಆ ನಿಟ್ಟಿನಲ್ಲಿ ಪ್ರಕರಣದ ವಿಚಾರಣೆಗೆ ಸ್ವೀಕರಿಸುವ ಮುನ್ನ ಕಾರಣಗಳನ್ನು ತಿಳಿಸಿಲ್ಲ ಅರ್ಜಿಯಲ್ಲಿ ವಾದ ಮಂಡಿಸಿರುವ ಸೋಹನ್ ಕುಮಾರ್, ಲೋಕಾಯುಕ್ತ ವಿಚಾರಣೆಗೆ ತಡೆ ನೀಡಬೇಕೆಂದು ಕೋರಿದ್ದರು.
ಈ ಅರ್ಜಿಯ ತುರ್ತು ವಿಚಾರಣೆಯನ್ನು ಇಂದೇ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ಅರ್ಜಿಯ ವಿಚಾರಣೆಯನ್ನು ನಾಳೆಗೆ ನಡೆಸುವುದಾಗಿ ಹೈಕೋರ್ಟ್ ಪೀಠ ತಿಳಿಸಿದೆ.