ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ಪರದೇಶಿಗಳಂತೆ ಬೀದಿಗೆ ಬಿದ್ರೂ ಬುದ್ದಿ ಬಂದಿಲ್ಲ: ಸಿಎಂ (BJP | Yeddyurappa | Congress | JDS | Deve gowda | Kumaraswamy)
ಕಾಂಗ್ರೆಸ್ ಪರದೇಶಿಗಳಂತೆ ಬೀದಿಗೆ ಬಿದ್ರೂ ಬುದ್ದಿ ಬಂದಿಲ್ಲ: ಸಿಎಂ
ಬೆಂಗಳೂರು, ಮಂಗಳವಾರ, 29 ಮಾರ್ಚ್ 2011( 09:31 IST )
WD
ಜನರಿಂದ ತಿರಸ್ಕೃತಗೊಂಡು ಪರದೇಶಿಗಳಂತೆ ಬೀದಿಗೆ ಬಿದ್ದಿರುವ ಕಾಂಗ್ರೆಸ್, ಜೆಡಿಎಸ್ ಸಾರ್ವತ್ರಿಕ ಚುನಾವಣೆಗೆ ಬರಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸವಾಲು ಹಾಕಿದ್ದಾರೆ.
ಅಧಿಕಾರ ಕಳೆದುಕೊಂಡು ರಸ್ತೆ ಬದಿಯಲ್ಲಿ ಓಡಾಡುವ ದುಸ್ಥಿತಿ ಬಂದಿದ್ದರೂ ನನ್ನ ರಾಜೀನಾಮೆಯನ್ನು ಎಷ್ಟು ಬಾರಿ ಕೇಳುತ್ತೀರಾ...ಬನ್ನಿ ಸಾರ್ವತ್ರಿಕ ಚುನಾವಣೆಗೆ ಹೋಗೋಣ ಎಂದು ಪ್ರತಿಪಕ್ಷಗಳಿಗೆ ಪಂಥಾಹ್ವಾನ ನೀಡಿದರು.
ಚನ್ನಪಟ್ಟಣ, ಜಗಳೂರು ಮತ್ತು ಬಂಗಾರಪೇಟೆ ಉಪಚುನಾವಣೆ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಭಿನ್ನವಿಲ್ಲ. ಅಷ್ಟೇ ಅಲ್ಲ ಫಲಿತಾಂಶದ ಮೇಲೆ ಭಿನ್ನಮತದ ಪರಿಣಾಮ ಬೀರುವುದು ಇಲ್ಲ ಎಂದರು.
ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಗಮನಕ್ಕೆ ತಂದರೆ ಸಾಕು ಜನ ನಮ್ಮನ್ನು ಬೆಂಬಲಿಸುತ್ತಾರೆ. ಕಾಂಗ್ರೆಸ್, ಜೆಡಿಎಸ್‌ನಲ್ಲಿರುವವರು ಕೂಡ ನಮಗೆ ಸಹಕಾರ ನೀಡಲಿದ್ದು ಮೂರು ಸ್ಥಾನಗಳಲ್ಲಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾಗಿರಬಹುದು ನಮಗೆ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಬಿಜೆಪಿ ಗೆಲ್ಲಲೇಬೇಕು ಎಂದು ತಾಕೀತು ಮಾಡಿದರು. ನಾವು ಗೆಲುವಿನ ಓಟ ಮುಂದುವರಿಸಿದರೆ ಇನ್ನು 20 ವರ್ಷ ಪ್ರತಿಪಕ್ಷಗಳು ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಹಗರಣಗಳ ಸರಮಾಲೆಯಿಂದ ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದೆ. ಪ್ರಧಾನಿ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ. ಸಂಸತ್ ಕಲಾಪ ನಡೆಸಲಾಗದ ಸ್ಥಿತಿ ನಿರ್ಮಾಣವಾಗಿದೆ. 5 ರಾಜ್ಯಗಳ ಚುನಾವಣೆ ನಂತರ ಲೋಕಸಭೆ ವಿಸರ್ಜನೆಯಾಗಲಿದೆ ಎಂದು ಭವಿಷ್ಯ ನುಡಿದರು.
ಜೆಡಿಎಸ್ ಅಪ್ಪ-ಮಕ್ಕಳ ಪಕ್ಷವಾಗಿದ್ದು, ಅವರನ್ನು ನಿರ್ನಾಮ ಮಾಡದೆ ರಾಜ್ಯಕ್ಕೆ ಉಳಿಗಾಲವಿಲ್ಲ. ಸಂಸತ್‌ನಲ್ಲಿ ನಿಂತು ಮಾಜಿ ಪ್ರಧಾನಿ ದೇವೇಗೌಡರು ಕರ್ನಾಟಕಕ್ಕೆ ಅನುದಾನ ನೀಡಬೇಡಿ ಎನ್ನಲು ನಾಚಿಕೆಯಾಗಬೇಡವೇ ಎಂದು ಪ್ರಶ್ನಿಸಿದರು.
ಸರಕಾರದ ಸಾಧನೆಗಳನ್ನು, ಪ್ರತಿಪಕ್ಷಗಳ ಚಾರ್ಜ್‌ಶೀಟ್‌ಗಳನ್ನು ಪುಸ್ತಕ ಮಾಡಿ ಪ್ರತಿ ಮನೆಗೆ ಹಂಚಬೇಕು. ಅಲ್ಲದೆ ನಮಗೆ ಕೈಕೊಟ್ಟು ಹೋದ ಅನರ್ಹ ಶಾಸಕರ 16 ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ಇಂದಿನಿಂದಲೇ ಸಿದ್ಥತೆ ನಡೆಸಿ ಪರ್ಯಾಯ ಅಭ್ಯರ್ಥಿಯನ್ನು ಬೆಳೆಸಿ ಎಂದು ಸಲಹೆ ನೀಡಿದರು.