ರಾಜ್ಯ ಸರಕಾರ ಹಗರಣ, ಭ್ರಷ್ಟಾಚಾರಗಳಿಂದ ತುಂಬಿ ತುಳುಕಿ ಹೋಗುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರತಿದಿನ ಒಂದೊಂದು ಹೊಸ, ಹೊಸ ಹಗರಣಗಳು ಬಿಚ್ಚಿಕೊಳ್ಳುತ್ತಿದ್ದರೂ ಈ ಬಗ್ಗೆ ಬಿಜೆಪಿ ಹೈಕಮಾಂಡ್ ತಲೆಕೆಡಿಸಿಕೊಂಡಿಲ್ಲ, ಕ್ರಮವನ್ನೂ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಹಗರಣಗಳ ಸರಕಾರ ಎಂದು ಹರಿಹಾಯ್ದರು.
ಕೇಂದ್ರ ಸರಕಾರದ ಸಚಿವರುಗಳ ಮೇಲೆ ಆರೋಪ ಕೇಳಿ ಬರುತ್ತಿದ್ದಂತೆ ಅವರ ರಾಜೀನಾಮೆಯನ್ನು ಪಡೆಯಲಾಯಿತು. ಕೆಲವರು ಜೈಲಿಗೂ ಹೋದರು. ಆದರೆ ರಾಜ್ಯ ಸರಕಾರದ ಮೇಲೆ ಆರೋಪಗಳ ಸುರಿಮಳೆಯೇ ಕೇಳಿ ಬಂದರು ಭಂಡರ ರೀತಿ ವರ್ತಿಸುತ್ತಿದ್ದಾರೆಂದು ದೂರಿದರು. ಹಾಗಾಗಿ ಇದು ಕೇಂದ್ರ ಮತ್ತು ರಾಜ್ಯ ಸರಕಾರದ ನಡುವಿನ ವ್ಯತ್ಯಾಸ ತೋರಿಸುತ್ತದೆ ಎಂದರು.