ಬಿಜೆಪಿಗೆ ಮತ ಹಾಕದಿದ್ರೆ ಕ್ಷೇತ್ರ ಅಭಿವೃದ್ಧಿ ಇಲ್ಲ: ಸಿಎಂ
ದಾವಣಗೆರೆ, ಶನಿವಾರ, 2 ಏಪ್ರಿಲ್ 2011( 09:36 IST )
PTI
ಬಿಜೆಪಿ ಬಿಟ್ಟು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿದರೆ ಮುಂದಿನ ದಿನಗಳಲ್ಲಿ ಜಗಳೂರು ಕ್ಷೇತ್ರ ಅಭಿವೃದ್ದಿಯಾಗುವುದಿಲ್ಲ. ಇದಕ್ಕೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ಅರಸೀಕೆರೆಯಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಎಸ್.ವಿ.ರಾಮಚಂದ್ರ ಗೆಲುವು ಸಾಧಿಸಿದರೆ ಯಡಿಯೂರಪ್ಪ ಸುಭದ್ರ ಆಡಳಿತ ನಡೆಸಲು ಸಾಧ್ಯವಾಗುತ್ತದೆ. ಪದೇ ಪದೇ ಈ ರೀತಿ ಉಪ ಚುನಾವಣೆ ಬರುವುದು ತಪ್ಪುತ್ತದೆ ಎಂದು ಹೇಳಿದರು.
ನಾನು ಇನ್ನೂ ಎರಡು ವರ್ಷ ರಾಜ್ಯ ಮುಖ್ಯಮಂತ್ರಿಯಾಗಬೇಕು ಎನ್ನುವವರು ಕೈ ಎತ್ತಿ ಎಂದು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಾಡಿರುವಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಇದುವರೆಗೆ ಮಾಡಿಲ್ಲ ಎಂದು ಟೀಕಿಸಿದರು.
ರೈತರಿಗೆ ಏನು ಬೇಕಾದರೂ ನೆರವು ನೀಡಲು ಸಿದ್ದನಿದ್ದೇನೆ. ನಾನು ಮಾಡಿರುವುದನ್ನು ವಿರೋಧ ಪಕ್ಷಗಳಿಗೇಕೆ ಮಾಡಲು ಸಾಧ್ಯವಾಗಿಲ್ಲ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು. ಸುವರ್ಣ ಭೂಮಿ ಯೋಜನೆಯಡಿ ರಾಜ್ಯದ ರೈತರಿಗೆ ತಲಾ 10 ಸಾವಿರ ರೂಪಾಯಿಗಳನ್ನು ನೀಡಲಿದ್ದೇನೆ. ಪ್ರತಿ ತಾಲೂಕಿನಲ್ಲಿ 5 ಸಾವಿರ ರೈತರನ್ನು ಗುರುತಿಸಿ ಒಂದು ಲಕ್ಷ ರೈತರಿಗೆ ಇದರ ನೆರವು ಸಿಗಲಿದೆ ಎಂದು ಯಡಿಯೂರಪ್ಪ ಹೇಳಿದರು.