ನಾಯಕತ್ವ ಬದಲಾವಣೆ ಕೂಗಿನೊಂದಿಗೆ ಭುಗಿಲೆದ್ದ ಭಿನ್ನಮತ ಶಮನವಾಗುತ್ತಿದ್ದಂತೆಯೇ ಇದೀಗ ಆಡಳಿತಾರೂಢ ಬಿಜೆಪಿಯೊಳಗಿನ ಮತ್ತೊಂದು ಒಳಜಗಳ ಬಹಿರಂಗಗೊಂಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಈಗಾಗಲೇ ಹಲವು ಶಾಸಕ, ಸಚಿವರ ಕೆಂಗಣ್ಣಿಗೆ ಗುರಿಯಾಗಿದ್ದರೆ. ಈಗ ಗೃಹ ಸಚಿವ ಆರ್.ಅಶೋಕ್ ಆ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಅಶೋಕ್ ಪದಚ್ಯುತಿಗೆ ಪಕ್ಷದೊಳಗೆ ವ್ಯವಸ್ಥಿತ ಸಂಚು ನಡೆದಿದ್ದು, ಇದರ ಹಿಂದೆ ಬೆಂಗಳೂರು ನಗರದ ಸಚಿವರೊಬ್ಬರ ಕೈವಾಡ ಇರುವುದಾಗಿ ಆರೋಪಿಸಿ 15ಕ್ಕೂ ಹೆಚ್ಚು ಶಾಸಕರು ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಾರೆಂದು ಮೂಲವೊಂದು ತಿಳಿಸಿದೆ.
ಭೂ ಹಗರಣದ ಸುಳಿಯಲ್ಲಿ ಸಿಲುಕಿದ್ದ ಅಶೋಕ್ ವಿರುದ್ಧ ಲೋಕಾಯುಕ್ತ ಕೇಸು ದಾಖಲಾಗುವ ಹಿಂದೆ ಮುಖ್ಯಮಂತ್ರಿಗೆ ಆಪ್ತರಾಗಿರುವ ಪ್ರಭಾವಿ ಸಚಿವರ ಕುಮ್ಮಕ್ಕಿದೆ. ಸಚಿವರ ಬೆಂಬಲಿಗ ಮಂಜುನಾಥ್ ಎಂಬುವರು ಕೇಸು ದಾಖಲಿಸಿದ್ದಾರೆ. ಪಕ್ಷದೊಳಗೆ ಪಿತೂರಿ ನಡೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಈ ಶಾಸಕರು ಆಗ್ರಹಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಈ ಮೊದಲು ಸುಬ್ರಹ್ಮಣ್ಯ ನಾಯ್ಡು ಹಾಗೂ ಆರ್.ಅಶೋಕ್ ಅಧಿಪತ್ಯ ಹೊಂದಿದ್ದರು. ಏತನ್ಮಧ್ಯೆ ನಾಯ್ಡು ರಾಜೀನಾಮೆ ನೀಡಿದ್ದಾರೆ. ಇದೀಗ ಪವರ್ ಫುಲ್ ಆಗಿರುವ ಅಶೋಕ್ ವಿರುದ್ದ ವ್ಯವಸ್ಥಿತ ಸಂಚು ಪಕ್ಷದೊಳಗೆ ನಡೆಯುತ್ತಿದೆ ಎಂದು ಕೆಲ ಶಾಸಕರು ಗಂಭೀರವಾಗಿ ಆರೋಪಿಸಿದ್ದಾರೆ. ಹೀಗೆ ಅಶೋಕ್ ವಿರುದ್ಧ ಎಫ್ಐಆರ್ ದಾಖಲಾದರೆ ರಾಜೀನಾಮೆ ನೀಡಬೇಕಾಗಿ ಬರುತ್ತದೆ. ಆಗ ನಗರ ಜಿಲ್ಲಾ ಉಸ್ತುವಾರಿಯನ್ನು ತನ್ನ ಕೈವಶ ಮಾಡಿಕೊಳ್ಳಬಹುದು ಎಂಬ ಲೆಕ್ಕಚಾರ 'ಆ ಸಚಿವರದ್ದಾಗಿದೆ' ಎನ್ನಲಾಗಿದೆ.