ಅಧಿಕಾರದ ದಾಹ ಮತ್ತು ಹಣಕ್ಕಾಗಿ ಆಪರೇಶನ್ ಕಮಲದ ಮೂಲಕ ಬಿಜೆಪಿ ಪಾಳಯಕ್ಕೆ ಸೇರ್ಪಡೆಗೊಂಡಿರುವ ಎಸ್.ವಿ.ರಾಮಚಂದ್ರ ಅವರನ್ನು ಉಪ ಚುನಾವಣೆಯಲ್ಲಿ ಜಗಳೂರು ಮತದಾರರು ಸೋಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಯಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಭಾನುವಾರ ಜಗಳೂರು ತಾಲೂಕಿನ ಬಿಳಿಚೋಡಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ದೇವೇಂದ್ರಪ್ಪ ಪರ ಮತಯಾಚಿಸಿ ಅವರು ಮಾತನಾಡಿದರು.
ಬಹುಮತ ಇಲ್ಲದೇ ಪಕ್ಷೇತರರ ಸಹಕಾರದಿಂದ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರಕಾರ, ಆಪರೇಷನ್ ಕಮಲ ಹುಟ್ಟುಹಾಕುವ ಮೂಲಕ ಪ್ರಜಾಪ್ರಭುತ್ವ ಮೌಲ್ಯದ ನಾಶಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು. ಆಪರೇಷನ್ ಕಮಲ ನಡೆಸಿ ರಾಜ್ಯದಲ್ಲಿ ಉಪ ಚುನಾವಣೆ ಬರುವಂತೆ ಬಿಜೆಪಿ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್, ಜೆಡಿಎಸ್ ಪಕ್ಷದ ಶಾಸಕರನ್ನು ಹಣ ನೀಡಿ ಖರೀದಿಸಿ ದುರಾಡಳಿತ ನಡೆಸುತ್ತಿರುವ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ತತ್ವ, ಸಿದ್ದಾಂತ, ಮೌಲ್ಯಗಳ ಬಗ್ಗೆ ಮಾತನಾಡುವ ಬಿಜೆಪಿ ಒಳಗೊಂದು, ಹೊರಗೊಂದು ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.