ಆಡಳಿತಾರೂಢ ಬಿಜೆಪಿ ಸರಕಾರದ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸರಕಾರ ತಪ್ಪು ಮಾಡಿದಾಗಲೆಲ್ಲ ಎಚ್ಚರಿಸಿದ್ದೇನೆ. ಹಾಗಂತ ಅದನ್ನೇ ಮುಂದಿಟ್ಟುಕೊಂಡು ನಾನು ಸರಕಾರದ ವಿರೋಧಿ ಎಂದು ಹೇಳುವುದು ಸರಿಯಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದ್ದಾರೆ.
ಯುಗಾದಿ ಸಂಭ್ರಮದ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕುಟುಂಬ ಸದಸ್ಯರೊಡನೆ ಇಲ್ಲಿನ ದುಬಾರೆ ಆನೆ ಶಿಬಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಈ ರೀತಿ ಪ್ರತಿಕ್ರಿಯಿಸಿದರು.
ಸರಕಾರದ ತಪ್ಪುಗಳನ್ನು ಹೇಳಿ ತಿದ್ದಿಕೊಳ್ಳುವಂತೆ ಸಲಹೆ, ಸೂಚನೆ ನೀಡಿದ್ದೇನೆ. ಆದರೆ ಸರಕಾರದ ಜತೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಲ್ಲದೆ, ಈ ಸಂದರ್ಭದಲ್ಲಿ ಎಲ್ಲರೂ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ಯಾವುದೇ ಟೀಕೆ-ಟಿಪ್ಪಣಿ ಮಾಡಲಾರೆ ಎಂದು ಹೇಳಿದರು.
ರಾಜ್ಯಪಾಲನಾಗಿ ಸಂವಿಧಾನದ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಿದ್ದೇನೆ. ಪ್ರತಿಯೊಂದಕ್ಕೂ ರಾಜ್ಯಪಾಲರು ಪ್ರತಿಪಕ್ಷಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆಂಬ ಆರೋಪ ಸರಿಯಲ್ಲ ಎಂದರು.