ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಟೀಮ್ ಇಂಡಿಯಾಕ್ಕೆ ಬಿಡಿಎ ಸೈಟ್; ಸಿಎಂಗೆ ಅಧಿಕಾರ ಇಲ್ಲ' (Yeddyurappa | BDA plots | World Cup | High Court | Kumar Bangarappa)
'ಟೀಮ್ ಇಂಡಿಯಾಕ್ಕೆ ಬಿಡಿಎ ಸೈಟ್; ಸಿಎಂಗೆ ಅಧಿಕಾರ ಇಲ್ಲ'
ಬೆಂಗಳೂರು, ಮಂಗಳವಾರ, 5 ಏಪ್ರಿಲ್ 2011( 12:09 IST )
ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಎದುರಾಳಿ ಶ್ರೀಲಂಕಾ ತಂಡವನ್ನು ಸೋಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಶ್ವಕಪ್ ವಿಜೇತ ತಂಡದ ಆಟಗಾರರಿಗೆ ಬಿಡಿಎ ನಿವೇಶನ ನೀಡುವುದಾಗಿ ಏಕಾಏಕಿ ಘೋಷಿಸಿದ್ದರು. ಆದರೆ ಈ ಭರವಸೆ ಈಡೇರಿಸುವ ಅಧಿಕಾರ ಮುಖ್ಯಮಂತ್ರಿಗಳಿಗೆ ಇಲ್ಲ ಎಂಬುದು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.
ವಿಶ್ವಕಪ್ ವಿಜೇತ ತಂಡದ ಹುರಿಯಾಳುಗಳಿಗೆ ನಗರದಿಂದ 30 ಕಿಲೋ ಮೀಟರ್ ದೂರದಲ್ಲಿ 50x80 ಬಿಡಿಎ ಸೈಟ್ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು.
ಆದರೆ ಮುಖ್ಯಮಂತ್ರಿಗಳಿಗೆ ಬಿಡಿಎ ಸೈಟ್ ನೀಡುವ ಅಧಿಕಾರ ಇಲ್ಲ ಎಂಬುದು ಅವರಿಗೆ ತಿಳಿದಿದೆ. ಆದರೂ ಬಿಟ್ಟಿ ಪ್ರಚಾರಕ್ಕಾಗಿ ಏಕಾಏಕಿ ಬಿಡಿಎ ಸೈಟ್ ನೀಡುವುದಾಗಿ ಘೋಷಿಸಿದ್ದಾರೆ.
ಸೈಟ್ ನೀಡೋ ಅಧಿಕಾರ ಸರಕಾರಕ್ಕಿಲ್ಲ-ಹೈಕೋರ್ಟ್ ಆದೇಶ; ಈ ಬಗ್ಗೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಯಾವುದೇ ವ್ಯಕ್ತಿಗಾಗಲಿ ಸೈಟ್ ನೀಡಿ ಎಂದು ಬಿಡಿಎಗೆ ನಿರ್ದೇಶನ ನೀಡುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ. 'ಜಿ ಕೆಟಗೆರಿಯಲ್ಲಿ ಸೈಟ್ ಹಂಚುವ ಅಧಿಕಾರ (ಮುಖ್ಯಮಂತ್ರಿ ವಿವೇಚನಾ ಕೋಟಾದ ಜಿ ಕೆಟಗೆರಿ) ಸರಕಾರಕ್ಕಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ ಕುಮಾರ್ ಬಂಗಾರಪ್ಪ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ಸೈಟ್ ಮಂಜೂರು ಮಾಡಲು ಬಿಡಿಎಗೆ ಶಿಫಾರಸು ಮಾಡುವ ಅಧಿಕಾರ ಸರಕಾರಕ್ಕೆ ಇಲ್ಲ. ಬಿಡಿಎ ನಿಯಮಗಳಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ನ್ಯಾಯಾಮೂರ್ತಿ ಎಸ್.ಅಬ್ದುಲ್ ನಜೀರ್ ತಮ್ಮ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದರು.
ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಾರಿಗೂ ಕೂಡ ಬಿಡಿಎ ಸೈಟ್ ಅನ್ನು ಗಿಫ್ಟ್ ಆಗಿ ನೀಡಲು ಸಾಧ್ಯವಿಲ್ಲ. ಹಾಗಾಗಿ ಟೀಮ್ ಇಂಡಿಯಾದ ಆಟಗಾರರಿಗೆ ಬಿಡಿಎ ಸೈಟ್ ನೀಡುವ ಸಿಎಂ ಘೋಷಣೆ ಕಾನೂನು ಬಾಹಿರ ಎಂಬುದಾಗಿ ವಕೀಲ ವಾಸುದೇವ ತಿಳಿಸಿದ್ದಾರೆ.
ಏತನ್ಮಧ್ಯೆ ಮೇಲುಕೋಟೆ ಯೋಗನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಲು ಮಂಡ್ಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, 121 ಕೋಟಿ ಜನತೆಯ ಪ್ರಾರ್ಥನೆ, ಆಸೆಯನ್ನು ಈಡೇರಿಸಿದ ಕ್ರೀಡಾಪಟುಗಳಿಗೆ ನಿವೇಶನ ನೀಡುವುದನ್ನು ಯಾರೊಬ್ಬರು ವಿರೋಧಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ದೇಶಕ್ಕಾಗಿ ಟ್ರೋಫಿಯನ್ನು ಗೆದ್ದುಕೊಟ್ಟ ತಂಡಕ್ಕೆ ಸ್ಮರಣೀಯ ಕೊಡುಗೆ ನೀಡುವುದರಲ್ಲಿ ತಪ್ಪೇನಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದ್ದರು.