ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರದ ಕಾವು ರಂಗೇರಿದ್ದು, ಬಿಜೆಪಿ ಪಕ್ಷವನ್ನು ನಿರ್ಮೂಲನೆ ಮಾಡುವ ಬಗ್ಗೆ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೂರು ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಸೋಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಬುಧವಾರ ಚನ್ನಪಟ್ಟಣದಲ್ಲಿ ಪಕ್ಷದ ಅಭ್ಯರ್ಥಿ ಪರ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಆಪರೇಶನ್ ಕಮಲದ ಮೂಲಕ ಪದೇ, ಪದೇ ಉಪ ಚುನಾವಣೆ ನಡೆಯುವಂತೆ ಮಾಡುವ ಬಿಜೆಪಿಗೆ ಮೂರು ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು.
ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ದತ್ತು ಪಡೆದಿದ್ದ ವಿಶ್ವನಾಥ್ ಎಂಬ ಬಾಲಕ ಈಗಲೂ ಅನಾಥನಾಗಿದ್ದಾನೆ. ಕೇವಲ ಪ್ರಚಾರಕ್ಕಾಗಿ ಯಡಿಯೂರಪ್ಪ ಗಿಮಿಕ್ ಮಾಡುತ್ತಾರೆ. ಆದರೆ ಮಂಗಳೂರಿನ ತಾಯಿ, ಮಕ್ಕಳ ಸ್ಥಿತಿ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಆ ಸಂದರ್ಭದಲ್ಲಿ ನಾನು ಖುದ್ದಾಗಿ ಮಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿ ತಾಯಿ, ಮಕ್ಕಳ ಯೋಗಕ್ಷೇಮ ವಿಚಾರಿಸಿ ನೆರವು ನೀಡಿದ್ದೆ. ಇದೇ ನನಗೂ ಮತ್ತು ಯಡಿಯೂರಪ್ಪನವರಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.