ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಿನಿ ಸಮರ; ಅಂತಿಮ ಕಸರತ್ತು-ಬಹಿರಂಗ ಪ್ರಚಾರಕ್ಕೆ ತೆರೆ (By poll | BJP | JDS | Congress | Kumaraswamy | Yeddyurappa | Deve gowda)
ಮಿನಿ ಸಮರ; ಅಂತಿಮ ಕಸರತ್ತು-ಬಹಿರಂಗ ಪ್ರಚಾರಕ್ಕೆ ತೆರೆ
ಬೆಂಗಳೂರು, ಗುರುವಾರ, 7 ಏಪ್ರಿಲ್ 2011( 20:26 IST )
ರಾಜ್ಯದ ಬಂಗಾರಪೇಟೆ, ಜಗಳೂರು ಹಾಗೂ ಚನ್ನಪಟ್ಟಣದಲ್ಲಿ ಏಪ್ರಿಲ್ 9ರಂದು ನಡೆಯಲಿರುವ ಮಿನಿ ಸಮರದ ಚುನಾವಣಾ ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆ ಬಿದ್ದಿದ್ದು, ಇದೀಗ ಪಕ್ಷದ ಅಭ್ಯರ್ಥಿಗಳು, ಪಕ್ಷದ ಕಾರ್ಯಕರ್ತರು ಮತದಾರರ ಒಲೈಕೆಗಾಗಿ ಮನೆ, ಮನೆ ಪ್ರಚಾರದಲ್ಲಿ ತೊಡಗಿದ್ದಾರೆ.
ಸಂಜೆ 5ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಮುಖಂಡರು ಮತದಾರನ ಮನವೊಲಿಸಿಕೊಳ್ಳುವ ಕೊನೆಗಳಿಯ ಪ್ರಯತ್ನ ಮುಂದುವರಿಸಿದ್ದಾರೆ.
ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗಿ ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಅಶ್ವತ್ಥ್, ಬಂಗಾರಪೇಟೆ ಹಾಗೂ ಜಗಳೂರಿನ ಶಾಸಕರಾಗಿದ್ದ ಎಂ.ನಾರಾಯಣಸ್ವಾಮಿ ಮತ್ತು ಎಸ್.ವಿ.ರಾಮಚಂದ್ರ ಅವರು ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದಾಗಿ ಉಪ ಚುನಾವಣೆ ನಡೆಯತ್ತಿದೆ.
ಉಪ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಪರಿಗಣಿಸಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಮೂರು ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಪೈಪೋಟಿಗೆ ಇಳಿದಿದ್ದಾರೆ.
ಚನ್ನಪಟ್ಟಣದಲ್ಲಿ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್‌ನ ರಘುನಂದನ್ ರಾಮಣ್ಣ ಹಾಗೂ ಜೆಡಿಎಸ್‌ನ ಸಿಂ.ಲಿಂ.ನಾಗರಾಜ್ ಕಣದಲ್ಲಿದ್ದಾರೆ. ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ. ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ರೇವಣ್ಣ, ಪಿ.ಜಿ.ಆರ್.ಸಿಂಧ್ಯಾ ಪಕ್ಷದ ಪರ ಪ್ರಚಾರ ನಡೆಸಿದರು.
ಬಂಗಾರಪೇಟೆಯ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ. ಕಾಂಗ್ರೆಸ್‌ನ ಕೆ.ಎಂ.ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಕೆ.ವೆಂಕಟೇಶಪ್ಪ ಕಣದಲ್ಲಿದ್ದು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಸ್.ವಿ.ರಾಮಚಂದ್ರಪ್ಪ ಜಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್‌ನ ದೇವೇಂದ್ರಪ್ಪ ಹಾಗೂ ಜೆಡಿಎಸ್‌ನ ಹುಚ್ಚವ್ವನಹಳ್ಳಿ ಮಂಜುನಾಥ ಚುನಾವಣಾ ಕಣದಲ್ಲಿದ್ದು, ಇವರೆಲ್ಲರ ಹರಸಾಹಸಕ್ಕೆ ಮತದಾರ ಪ್ರಭು ಏ.9ರಂದು ತೀರ್ಪು ನೀಡಲಿದ್ದಾನೆ.
ಮತಬೇಟೆಗೆ ಚಿರಂಜೀವಿ-ಲಾಠಿ ಪ್ರಹಾರ: ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಪರ ಪ್ರಚಾರ ಕೈಗೊಳ್ಳಲು ಗುರುವಾರ ಬಂಗಾರಪೇಟೆಗೆ ನಟ ಚಿರಂಜೀವಿ ಆಗಮಿಸಿದಾಗ ನೂಕುನುಗ್ಗಲು ಉಂಟಾಗಿ, ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆಯಿತು. ಚಿರಂಜೀವಿ ಹೋದ ಕಡೆಯಲ್ಲೆಲ್ಲಾ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೇಂದ್ರ ಸಚಿವ ಮುನಿಯಪ್ಪ, ಸುದರ್ಶನ್, ನಜೀರ್ ಅಹ್ಮದ್ ಅವರ ಜತೆಗೂಡಿ ಕಾಂಗ್ರೆಸ್ ಅಭ್ಯರ್ಥಿ ಪರ ಚಿರಂಜೀವಿ ಮತಯಾಚಿಸಿದರು.