ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಿನಿ ಸಮರ; ಶನಿವಾರ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ (BJP | Congress | JDS | By poll | Yeddyurappa | Kumaraswamy)
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆಯಲಿರುವ ಉಪ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಮತ್ತೊಂದೆಡೆ ಅಭ್ಯರ್ಥಿಗಳು ಕೊನೆಯ ಪ್ರಯತ್ನ ಎಂಬಂತೆ ಮನೆ, ಮನೆ ಸುತ್ತುವ ಮೂಲಕ ಮತದಾರನ ಒಲೈಕೆಯಲ್ಲಿ ನಿರತರಾಗಿದ್ದಾರೆ.

ಆಡಳಿತಾರೂಢ ಬಿಜೆಪಿ, ವಿಧಾನಸಭೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ನಡೆಸಿದ ಆಪರೇಷನ್ ಕಮಲದಿಂದಾಗಿ ಚನ್ನಪಟ್ಟಣ, ಬಂಗಾರಪೇಟೆ ಮತ್ತು ಜಗಳೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವಂತಾಗಿದೆ.

ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆಯೇ ತೆರೆ ಬಿದ್ದಿದ್ದರಿಂದ ಅಭ್ಯರ್ಥಿಗಳು ಮತದಾರರ ಮನೆಗಳಿಗೆ ತೆರಳಿ ಮತಯಾಚಿಸುವ ಮೂಲಕ ಕೊನೆಗಳಿಗೆಯ ಕಸರತ್ತು ಮುಂದುವರಿಸಿದ್ದಾರೆ.

ಮೂರು ಕ್ಷೇತ್ರಗಳಲ್ಲಿ ಬಹುತೇಕ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜಗಳೂರಿನ ಬಿಜೆಪಿ ಅಭ್ಯರ್ಥಿಗೆ ಬಂಡಾಯ ಅಭ್ಯರ್ಥಿಯ ಬಿಸಿ ತಟ್ಟಿದೆ. ಉಳಿದ ಎರಡು ಕ್ಷೇತ್ರಗಳಾದ ಚನ್ನಪಟ್ಟಣ ಹಾಗೂ ಬಂಗಾರಪೇಟೆಗಳಲ್ಲಿನ ಅಭ್ಯರ್ಥಿಗಳಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿಲ್ಲ.

ಬಿಜೆಪಿಯ ಆಪರೇಷನ್ ಕಮಲಕ್ಕೆ ಚನ್ನಪಟ್ಟಣದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಎಂ.ಸಿ.ಅಶ್ವತ್ಥ್, ಬಂಗಾರಪೇಟೆಯ ಕಾಂಗ್ರೆಸ್ ಶಾಸಕ ಎಂ.ನಾರಾಯಣಸ್ವಾಮಿ ಹಾಗೂ ಜಗಳೂರಿನ ಕಾಂಗ್ರೆಸ್ ಶಾಸಕ ಎಸ್.ವಿ.ರಾಮಚಂದ್ರ ಬಲಿಯಾಗಿದ್ದರು. ಈ ಕ್ಷೇತ್ರಗಳಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಎರಡನೇ ಚುನಾವಣೆ ನಡೆಯುತ್ತಿದೆ.

ಬಿಜೆಪಿ ಕಸಿದುಕೊಂಡಿರುವ ಸ್ಥಾನಗಳನ್ನು ಹೇಗಾದರೂ ಮಾಡಿ ತಮ್ಮ ತೆಕ್ಕೆಗೆ ತಂದುಕೊಳ್ಳಬೇಕೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹರಸಾಹಸ ಮಾಡುತ್ತಿದ್ದಾರೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತದಾರನ ಒಲವು ಯಾರಿಗೆ ಎಂಬುದು ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಮತಯಂತ್ರಗಳಲ್ಲಿ ದಾಖಲಾಗಲಿದೆ.

ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡು, 5 ಗಂಟೆ ತನಕ ನಡೆಯಲಿದೆ. ಮತದಾನ ಸುಗಮವಾಗಿ ನಡೆಯಲು ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇವನ್ನೂ ಓದಿ