ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಣ ಕೊಡದೆ 'ವಂಚನೆ': ಪಕ್ಷಗಳ ವಿರುದ್ಧ ಮತದಾರರ ಆಕ್ರೋಶ! (Note for Vote | By-Election | Jagalur | Channapatna | Bangarpet | Karnataka)
ಒಂದೆಡೆ ಭ್ರಷ್ಟಾಚಾರ ಕೊನೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮೂಲಕ ದೇಶಾದ್ಯಂತ ಕಿಚ್ಚು ಹತ್ತಿಕೊಂಡಿದ್ದರೆ, ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆ ಸಂದರ್ಭ ಜಗಳೂರು ವಿಧಾನಸಭಾ ಕ್ಷೇತ್ರದ ಮಹಿಳೆಯರು, ನಮಗೆ ಮತ ಹಾಕಲು ದುಡ್ಡು ಕೊಡದೆ ಮೋಸ ಮಾಡಿದ್ದಾರೆ ಎಂದು ಆಕ್ರೋಶದಿಂದ ಕೂಗಾಡಿದ ಘಟನೆಯೊಂದು ಶನಿವಾರ ನಡೆಯಿತು.

ದಾವಣಗೆರೆಯ ಜಗಳೂರು ಎ.ಡಿ.ಕಾಲೊನಿ ಮತಗಟ್ಟೆಯಲ್ಲಿ ಟಿವಿ ಚಾನೆಲ್‌ಗಳೊಂದಿಗೆ ಆಕ್ರೋಶದಿಂದ ಕೂಗಾಡಿದ ಮಹಿಳೆಯರು, ಬಿಜೆಪಿಯವರು ನಮಗೆ ಓಟಿದ್ದರೂ ಹಣ ಕೊಡದೆ ಮೋಸ ಮಾಡಿದೆ, ಕಾಂಗ್ರೆಸ್ ಪಕ್ಷದವರು ಬೆಳ್ಳಂಬೆಳಿಗ್ಗೆಯೇ 9 ಗಂಟೆಗೆ ಒಂದು ಓಟಿಗೆ 200 ರೂಪಾಯಿಗಳಂತೆ ಮನೆಗೆ ತಂದು ಮುಟ್ಟಿಸಿದ್ದಾರೆ ಎಂದು ಹೇಳಿದರು..

ಒಂದು ಓಟಿರುವ ಮನೆಗೆ 200 ರೂಪಾಯಿ ದೊರೆಯುತ್ತದೆ. ಬಿಜೆಪಿಯವರು ಕೆಲವರಿಗೆ ಕೊಟ್ಟಿದ್ದಾರೆ, ಕೆಲವರಿಗೆ ಕೊಡೋದಿಲ್ಲ. ಬಿಜೆಪಿ ಸರಕಾರವೇ ಇರುವಾಗ ಅವರಿಗೆ ಬಜೆಟಿನಲ್ಲೇ ಹಣ ಸಿಗುತ್ತೆ, ಕೊಡಬಹುದಿತ್ತಲ್ಲಾ... ಹತ್ತು ಓಟು ಇದ್ರೆ ಐದು ಮಂದಿಗೆ ಮಾತ್ರ ಕೊಡ್ತಾರೆ, ಎರಡು ಓಟಿದ್ದರೆ ಒಂದು ಓಟಿಗೆ ಮಾತ್ರ ದುಡ್ಡು ಕೊಡುತ್ತಾರೆ. ಆದರೆ, ಕಾಂಗ್ರೆಸಿನವರು ಹಾಗಲ್ಲ, ಪ್ರಾಮಾಣಿಕವಾಗಿ ಹಣ ತಂದು ಒಪ್ಪಿಸುತ್ತಾರೆ ಎಂದು ಈ ಮಹಿಳೆಯರು ದೂರುತ್ತಿದ್ದುದು ಕಂಡುಬಂತು.

ಓಟಿಗೆ ನಿಂತಿರುವವರಿಗೆ ಅವರ ಪಕ್ಷದಿಂದ ಹಣ ಮಂಜೂರಾಗಿರುತ್ತದೆ. ಅವನ್ನೆಲ್ಲವನ್ನೂ ಅವರೇ ಇಟ್ಟುಕೊಂಡಿದ್ದಾರೆ, ಮತದಾರರಿಗೆ ಹಣ ಕೊಡದೆ ವಂಚಿಸುತ್ತಿದ್ದಾರೆ ಎಂದು ಈ ಮಹಿಳೆಯರು ದೂರುತ್ತಿದ್ದುದು ಟಿವಿ ಚಾನೆಲ್‌ನಲ್ಲಿ ಕಾಣಿಸುತ್ತಿದ್ದು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟರ ಮಟ್ಟಿಗೆ ಕೆಟ್ಟು ಹೋಗಿದೆ ಎಂಬುದನ್ನು ಸಂಕೇತಿಸಿತು.

ಅವರು ಕೊನೆಗೆ ಹೇಳಿದ ಮಾತು ಕೇಳಿ: "ಹತ್ತು ಓಟಿದ್ರೆ 5 ಓಟಿಗೆ ದುಡ್ಡು ಕೊಟ್ಟಿದ್ದಾರೆ, ನಾಲ್ಕಿದ್ರೆ ಎರಡು ಓಟಿಗೆ ಮಾತ್ರ ಹಣ ಕೊಟ್ಟಿದ್ದಾರೆ. ಹಾಗೆಲ್ಲಾ ಮಾಡ್ಬಾರ್ದು. ಎಷ್ಟು ಓಟಿದೆಯೋ, ಅಷ್ಟು ಹಣ ಕೊಟ್ಟು (ವ್ಯವಹಾರ) ಮುಗಿಸಿಬಿಡ್ಬೇಕು, ಅಷ್ಟೇ"!

ಚುನಾವಣೆಗಳೇ ಭ್ರಷ್ಟಾಚಾರಕ್ಕೆ ಮೂಲ ಎಂಬ ಮಾತು 'ಹೌದಲ್ಲಾ' ಎಂದು ಯೋಚಿಸುವಂತೆ ಮಾಡಿದ್ದು ಈ ಪ್ರಕರಣ. ಮತದಾರರು ಓಟಿಗೆ ನಿಂತವರಿಂದ ಹಣ ಪಡೆಯುವುದನ್ನು ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ತಿಳಿದುಕೊಳ್ಳುವಷ್ಟರ ಮಟ್ಟಿಗೆ ರಾಜಕಾರಣಿಗಳು ಮತದಾರರ ಮನಸ್ಸನ್ನು ಕೆಡಿಸಿಬಿಟ್ಟಿದ್ದಾರೆ ಅಲ್ಲವೇ?
ಇವನ್ನೂ ಓದಿ