ಲೋಕಪಾಲ ಮಸೂದೆ ಕರಡು ಸಿದ್ಧಪಡಿಸುವ ಕುರಿತು ಅಣ್ಣಾ ಹಜಾರೆಯವರ ನಿರಶನ ಹೋರಾಟಕ್ಕೆ ಜಯ ದೊರೆತ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇದರ ಜತೆಗೆ ರಾಜ್ಯಗಳ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ವಿಚಾರವೂ ಚರ್ಚೆಯಾಗಬೇಕಿದೆ ಎಂದು ಹೇಳಿದ್ದಾರೆ.
ಯಾದಗಿರಿಯ ಮುದನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಲೋಕಪಾಲ ಕಾಯ್ದೆಯು ಜಾರಿಗೆ ಬಂದರೆ ಭ್ರಷ್ಟಾಚಾರ ನಿರ್ಮೂಲನೆ ಖಂಡಿತಾ ಸಾಧ್ಯ. ದೇಶದ ಸಮಗ್ರ ಅಭಿವೃದ್ಧಿಗೆ ಈ ಕಾಯ್ದೆ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.
ಎಲ್ಲ ಮುಖ್ಯಮಂತ್ರಿಗಳ ಸಭೆ ಕರೆದು, ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಸಂಗತಿಯ ಕುರಿತು ಚರ್ಚಿಸಬೇಕಾಗಿದೆ ಎಂದ ಅವರು, ಈ ಕುರಿತು ಸಲಹೆ ನೀಡಲು ತಾನು ಸಿದ್ಧವಿರುವುದಾಗಿ ಹೇಳಿದರು.
ಇದೇ ವೇಳೆ, ಆಧಾರರಹಿತ ಆರೋಪಗಳನ್ನು ಮಾಡುತ್ತಾ ವಿರೋಧ ಪಕ್ಷಗಳು ತಮ್ಮ ತೇಜೋವಧೆ ಆಂದೋಲನ ನಡೆಸುತ್ತಿವೆ ಎಂದು ಆರೋಪಿಸಿದ ಮುಖ್ಯಮಂತ್ರಿ, ಲೋಕಪಾಲ ಶಾಸನವನ್ನು ತಕ್ಷಣವೇ ಜಾರಿಗೊಳಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆದು ಒತ್ತಾಯಿಸಿದರು. ಇದರಿಂದ ರಾಜ್ಯದ ಲೋಕಾಯುಕ್ತರಿಗೂ ಹೆಚ್ಚಿನ ಅಧಿಕಾರ ದೊರೆಯಬಹುದಾಗಿದೆ ಎಂದು ಅವರು ಹೇಳಿದರು.